57ನೇ ವಯಸ್ಸಿನಲ್ಲಿ ರಾಜ್ಯಮಟ್ಟದ ಶೂಟಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ನಟ ಜಗ್ಗೇಶ ಪತ್ನಿ…!

 ಬೆಂಗಳೂರು : ‘ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು ಸಾಧನೆಗೆ ಅಲ್ಲ’ ಎಂಬುದನ್ನು ಖ್ಯಾತ ನಟ ಜಗ್ಗೇಶ ಪತ್ನಿ ಹಾಗೂ ಆಹಾರ ತಜ್ಞೆಯೂ  ಪರಿಮಳಾ ಜಗ್ಗೇಶ ಅವರು ಸಾಬೀತು ಪಡಿಸಿದ್ದಾರೆ. ಅವರು ತಮ್ಮ  57  ವಯಸ್ಸಿನಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-2026’ರಲ್ಲಿ ಪರಿಮಳಾ ಜಗ್ಗೇಶ ಪಾಲ್ಗೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಚಾಂಪಿಯನ್‌ಶಿಪ್ ವಿಭಾಗದಲ್ಲಿ  ಮಾಸ್ಟರ್ ವಿಮೆನ್ ಇಂಡಿವಿಜುವಲ್ ವಿಭಾಗದಲ್ಲಿ 342-4x ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಗೆದಿದ್ದಾರೆ.
1994ರಿಂದಲೂ ಮಧುಮೇಹದಿಂದ ಬಳಲುತ್ತಿರುವ ಡಾ. ಪರಿಮಳ ಅವರಿಗೆ  ಸಕ್ಕರೆ ಪ್ರಮಾಣ ಏರುಪೇರಾಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಮೀರಿ ನಿಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ರೂಢಿಪಿಸಿಕೊಂಡು ಅಭ್ಯಾಸ ನಡೆಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ನಿರಂತರ ಪರಿಶ್ರಮದಿಂದ ಅವರು ಈಗ ಬೆಳ್ಳಿ ಪದಕ ಗೆದ್ದಿದ್ದಾರೆ.
ಪತ್ನಿಯ ಸಾಧನೆ ಬಗ್ಗೆ ನಟ ಜಗ್ಗೇಶ್‌ ಇನ್ಸ್ಟಾಂಗ್ರಾಂ ಪೋಸ್ಟ್‌ ಹಂಚಿಕೊಂಡಿದ್ದಾರೆ. “ಪರಿಮಳ ನಾನು ಬದುಕಲ್ಲಿ ಆಯ್ಕೆ ಮಾಡಿಕೊಂಡ ಶ್ರೇಷ್ಠ ವ್ಯಕ್ತಿತ್ವದ ಛಲಗಾತಿ. ಆಕೆ ಚಿಂತನೆ ಸದಾ ಆಶಾದಾಯಕ. ಎಸ್‌ಎಸ್‌ಎಲ್‌ಸಿ ಓದುವಾಗ ನಮ್ಮ ಮದುವೆಯಾಯಿತು. ಆಗ ನಾನು ತಂದೆಯಿಂದ ದೂರವಾಗಿ ಸಾಮಾನ್ಯರಲ್ಲಿ ಸಾಮಾನ್ಯ ಜೀವಿ, ಒಂದು ದಿನದ ಸಣ್ಣ ಪಾತ್ರಕ್ಕೆ ಅಲೆಯುತ್ತಿದ್ದ ದಿನಗಳಾಗಿದ್ದವು.. ಆಗ ಅವಳ ಬೇಡಿಕೆ, ದಯವಿಟ್ಟು ನನ್ನ ಓದಿಸು ಎಂದು, ಅದಕ್ಕೆ ನಾನು ಒಪ್ಪಿ ಈಸ್ಟ್‌ವೆಸ್ಟ್‌ ಕಾಲೇಜಿಗೆ ಸೇರಿಸಿದೆ” ಎಂದು ಅವರು ಬರೆದುಕೊಂಡಿದ್ದಾರೆ.
“ಪಿಯುಸಿಯಲ್ಲಿ ಪ್ರಥಮ ರ್ಯಾಂಕ್ ನಂತರ ಬಿಎಂಎಸ್‌ ಕಾಲೇಜಿನಲ್ಲಿ ಬಿಇ, ನಂತರ ಕಂಪ್ಯೂಟರ್‌ ಡಿಪ್ಲೋಮಾ, ನಂತರ ಮೆಡಿಕಲ್ ಟ್ರಾನ್ಸ್ಕ್ರಿಪ್ಶನ್‌ ,  ನಂತರ ಡಯಟ್ ಕಂಪನಿ. ಪ್ರಧಾನಿ ಮೋದಿ ಅವರ ಉತ್ತೇಜನ ಪ್ರಯುಕ್ತ ಶ್ರೀ ಅನ್ನ ಆಹಾರ ಪದ್ಧತಿಯ ಬಗ್ಗೆ ಪುಸ್ತಕ ಬರವಣಿಗೆ. ಇತ್ತೀಚೆಗೆ ಅಂದರೆ 57ನೇ ವಯಸ್ಸಿನಲ್ಲಿ ಹೊಸ ಪ್ರಯತ್ನ. ಶೂಟಿಂಗ್ ಅಕಾಡೆಮಿ ಸೇರ್ಪಡೆಗೊಂಡು ಇಂದು ರಾಜ್ಯ ಮಟ್ಟದ ಶೂಟಿಂಗ್ ನಲ್ಲಿ ಬೆಳ್ಳಿ ಪದಕ” ಎಂದು ಜಗ್ಗೇಶ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಗಂಡನಾಗಿ ಮಡದಿ ಪರಿಮಳ ಅವರಿಗೆ ಹೃದಯಪೂರ್ವಕ ಶುಭಕಾಮನೆಗಳು” ಎಂದು ಜಗ್ಗೇಶ್‌ ಹೇಳಿದ್ದಾರೆ.
https://www.instagram.com/actor_jaggesh/?utm_source=ig_embed&ig_rid=2e2adb8c-b05d-4e53-b0c2-c52ac9918b39
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement