ಎಐ ಕ್ಷೇತ್ರದಲ್ಲಿ ಭಾರತದ ಅದ್ಭುತ ಸಾಧನೆ : ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರು ಮೂಲದ ‘ಸರ್ವಂ ಎಐ’

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕ್ಷೇತ್ರದಲ್ಲಿ ಈವರೆಗೆ ಅಮೆರಿಕ ಮತ್ತು ಚೀನಾ ದೇಶಗಳದ್ದೇ ಪ್ರಾಬಲ್ಯವಿತ್ತು. ಭಾರತವು ಪ್ರತಿಭಾವಂತರ ನೆಲೆಯಾಗಿದ್ದರೂ, ಮೂಲಭೂತ ಎಐ ಮಾದರಿಗಳ (Foundational AI models) ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂಬ ಮಾತುಗಳಿದ್ದವು. ಆದರೆ, ಬೆಂಗಳೂರು ಮೂಲದ ಸ್ಟಾರ್ಟ್ಅಪ್ ‘ಸರ್ವಂ ಎಐ’ (Sarvam AI) ಈಗ ಈ ಚಿತ್ರಣವನ್ನು ಬದಲಿಸುತ್ತಿದೆ. ಕಂಪನಿಯು ಭಾರತದಲ್ಲೇ ಅಭಿವೃದ್ಧಿಪಡಿಸಿದ ತನ್ನ ‘ಸೊವೆರಿನ್‌ ಎಐ’ (Sovereign AI) ಮೂಲಕ ಜಾಗತಿಕ ಗಮನ ಸೆಳೆಯುತ್ತಿದೆ.
ವಿಶೇಷವಾಗಿ ಈ ವಾರ ಬಿಡುಗಡೆಯಾಗಿರುವ ಸರ್ವಂ ಎಐನ ‘ಸರ್ವಂ ವಿಷನ್’ (Sarvam Vision) ಮತ್ತು ‘ಬುಲ್ ಬುಲ್’ (Bulbul) ಎಂಬ ಎರಡು ಟೂಲ್‌ಗಳು ಎಐ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಿವೆ.

ಚಾಟ್ ಜಿಪಿಟಿ, ಜೆಮಿನಿಯನ್ನೇ ಹಿಂದಿಕ್ಕಿದ ‘ಸರ್ವಂ ವಿಷನ್’
ದಾಖಲೆಗಳನ್ನು ಓದುವ ಮತ್ತು ಅರ್ಥೈಸಿಕೊಳ್ಳುವ ತಂತ್ರಜ್ಞಾನವಾದ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ವಿಭಾಗದಲ್ಲಿ ‘ಸರ್ವಂ ವಿಷನ್’ ಅಪ್ರತಿಮ ಸಾಧನೆ ಮಾಡಿದೆ. ಕಂಪನಿಯ ಸಹ-ಸಂಸ್ಥಾಪಕ ಪ್ರತ್ಯೂಷಕುಮಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ‘ಸರ್ವಂ ವಿಷನ್’ ಹಲವಾರು ಬೆಂಚ್‌ಮಾರ್ಕ್‌ಗಳಲ್ಲಿ ಜಾಗತಿಕ ದೈತ್ಯ ಕಂಪನಿಗಳನ್ನೇ ಮಣಿಸಿದೆ.
OlmOCR-Bench: ಈ ಪರೀಕ್ಷೆಯಲ್ಲಿ ಸರ್ವಂ ವಿಷನ್ 84.3% ನಿಖರತೆ ಸಾಧಿಸಿದೆ. ಇದು ಗೂಗಲ್‌ನ ‘ಜೆಮಿನಿ 3 ಪ್ರೊ’ ಮತ್ತು ‘ಡೀಪ್‌ಸೀಕ್ ಒಸಿಆರ್’ ಮಾಡೆಲ್‌ಗಳಿಗಿಂತ ಹೆಚ್ಚು. ಚಾಟ್ ಜಿಪಿಟಿ (ChatGPT) ಈ ಪಟ್ಟಿಯಲ್ಲಿ ತೀರಾ ಕೆಳಗಿದೆ.
OmniDocBench v1.5: ಸಂಕೀರ್ಣ ಲೇಔಟ್‌ಗಳು, ತಾಂತ್ರಿಕ ಕೋಷ್ಟಕಗಳು (Technical tables) ಮತ್ತು ಗಣಿತದ ಸೂತ್ರಗಳನ್ನು ಅರ್ಥೈಸಿಕೊಳ್ಳುವ ಈ ಪರೀಕ್ಷೆಯಲ್ಲಿ ಸರ್ವಂ 93.28% ಅಂಕ ಗಳಿಸಿದೆ. ಕ್ಲಿಷ್ಟಕರವಾದ ಫಾರ್ಮ್ಯಾಟಿಂಗ್ ಹೊಂದಿರುವ ದಾಖಲೆಗಳನ್ನು ಓದುವಲ್ಲಿ ಇದು ಜಾಗತಿಕ ಮಾದರಿಗಳಿಗಿಂತ ಮೇಲುಗೈ ಸಾಧಿಸಿದೆ.
ಟೀಕಿಸಿದ್ದವರೇ ಈಗ ಪ್ರಶಂಸಕರು
ಹಿಂದೆ ಭಾರತೀಯ ಭಾಷೆಗಳಿಗೆ ಸೀಮಿತವಾದ ಸಣ್ಣ ಎಐ ಮಾಡೆಲ್‌ಗಳನ್ನು ತಯಾರಿಸುತ್ತಿದೆ ಎಂದು ಟೀಕಿಸಿದ್ದ ಜಾಗತಿಕ ತಂತ್ರಜ್ಞಾನ ವಿಶ್ಲೇಷಕರು ಈಗ ಸರ್ವಂ ಎಐ ಕಾರ್ಯವೈಖರಿಗೆ ಮಾರುಹೋಗಿದ್ದಾರೆ. ಪ್ರಸಿದ್ಧ ವಿಶ್ಲೇಷಕ ಡೀಡಿ ದಾಸ್, “ನಾನು ಸರ್ವಂ ಬಗ್ಗೆ ತಪ್ಪು ತಿಳಿದಿದ್ದೆ. ಭಾರತೀಯ ಭಾಷೆಗಳಿಗಾಗಿ ಅವರು ರೂಪಿಸಿರುವ ಟೆಕ್ಸ್ಟ್-ಟು-ಸ್ಪೀಚ್ ಮತ್ತು ಒಸಿಆರ್ ಮಾದರಿಗಳು ಅತ್ಯುತ್ತಮವಾಗಿವೆ ಮತ್ತು ಕಡಿಮೆ ದರದಲ್ಲಿ ಲಭ್ಯವಿವೆ,” ಎಂದು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಬುಲ್ ಬುಲ್: ಭಾರತೀಯ ಭಾಷೆಗಳ ಧ್ವನಿ
ಸರ್ವಂ ಎಐ ಬಿಡುಗಡೆ ಮಾಡಿರುವ ಮತ್ತೊಂದು ಪ್ರಮುಖ ಸಾಧನವೆಂದರೆ ‘ಬುಲ್ ಬುಲ್ ವಿ3’ (Bulbul V3). ಇದು ಪಠ್ಯವನ್ನು ಧ್ವನಿಯಾಗಿ (Text-to-Speech) ಪರಿವರ್ತಿಸುವ ಎಐ ಮಾಡೆಲ್ ಆಗಿದ್ದು, ಜಾಗತಿಕ ಮಟ್ಟದ ‘ಇಲೆವೆನ್‌ಲ್ಯಾಬ್ಸ್’ (ElevenLabs) ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದು ಪ್ರಸ್ತುತ 11 ಭಾರತೀಯ ಭಾಷೆಗಳಲ್ಲಿ 35ಕ್ಕೂ ಹೆಚ್ಚು ಧ್ವನಿಗಳನ್ನು ಹೊಂದಿದೆ. ಶೀಘ್ರದಲ್ಲೇ ಇದನ್ನು 22 ಭಾಷೆಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.
ಭಾರತದ ವಿಶಿಷ್ಟ ಭಾಷಾ ವೈವಿಧ್ಯತೆ ಮತ್ತು ಸಂಕೀರ್ಣ ದಾಖಲೆಗಳನ್ನು ನಿರ್ವಹಿಸುವಲ್ಲಿ ಈ ‘ಮೇಡ್ ಇನ್ ಇಂಡಿಯಾ’ ಎಐ ಮಾಡೆಲ್‌ಗಳು ಈಗ ಹೊಸ ಕ್ರಾಂತಿ ಸೃಷ್ಟಿಸುತ್ತಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement