ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಆಂಥ್ರೋಪಿಕ್’ (Anthropic) ಸಂಸ್ಥೆಯ ಸುರಕ್ಷತಾ ಸಂಶೋಧನಾ ವಿಭಾಗದ ಮುಖ್ಯಸ್ಥ ಮೃಣಾಂಕ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೋಮವಾರ (ಫೆಬ್ರವರಿ 9) ಸಾಮಾಜಿಕ ಜಾಲತಾಣ ‘X’ ನಲ್ಲಿ ಅವರು ಹಂಚಿಕೊಂಡಿರುವ ಅವರ ರಾಜೀನಾಮೆ ಪತ್ರವು ತಂತ್ರಜ್ಞಾನ ಲೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೃಣಾಂಕ ಶರ್ಮಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಸಂಸ್ಥೆಯ ಒಳಗಿನ ಒತ್ತಡ ಮತ್ತು ಮೌಲ್ಯಗಳ ಕುರಿತು ಮಾರ್ಮಿಕವಾಗಿ ಬರೆದಿದ್ದಾರೆ.
“ವಿಶ್ವವು ಕೇವಲ ಎಐನಿಂದ ಮಾತ್ರವಲ್ಲದೆ, ಪರಸ್ಪರ ಸಂಬಂಧ ಹೊಂದಿರುವ ಸರಣಿ ಬಿಕ್ಕಟ್ಟುಗಳಿಂದ ಅಪಾಯದಲ್ಲಿದೆ” ಎಂದು ಅವರು ಎಚ್ಚರಿಸಿದ್ದಾರೆ. ಜಗತ್ತಿನ ಮೇಲೆ ಪ್ರಭಾವ ಬೀರುವ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಮ್ಮ ವಿವೇಕವೂ ಬೆಳೆಯಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಮೌಲ್ಯಗಳೇ ನಮ್ಮ ಕ್ರಿಯೆಗಳನ್ನು ಆಳುವಂತೆ ಮಾಡುವುದು ಎಷ್ಟು ಕಷ್ಟ ಎಂಬುದು ನನಗೆ ಪದೇ ಪದೇ ಅರಿವಾಗಿದೆ. ಸಂಸ್ಥೆಯ ಒಳಗಿನ ಒತ್ತಡಗಳಿಂದಾಗಿ ನಮಗೆ ಅತ್ಯಂತ ಮುಖ್ಯವಾದ ಮೌಲ್ಯಗಳನ್ನು ಬದಿಗಿಡುವ ಪರಿಸ್ಥಿತಿ ಎದುರಾಗುತ್ತಿದೆ” ಎಂದು ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.
“ಎಐ (AI) ಸಹಾಯಕರು ನಮ್ಮನ್ನು ಹೇಗೆ ಮಾನವೀಯತೆಯನ್ನು ಹೇಗೆ ಕುಂದಿಸುತ್ತಾರೆ ಅಥವಾ ನಮ್ಮ ಮಾನವೀಯತೆಯನ್ನು ವಿರೂಪಗೊಳಿಸುತ್ತಾರೆ” ಎಂಬುದನ್ನು ಅರ್ಥಮಾಡಿಕೊಳ್ಳುವುದು ತಮ್ಮ ಅಂತಿಮ ಯೋಜನೆಗಳಲ್ಲಿ ಒಂದಾಗಿದೆ ಎಂದು ಶರ್ಮಾ ಗಮನಸೆಳೆದಿದ್ದಾರೆ. ಆಂಥ್ರೊಪಿಕ್‌ನ ಇತ್ತೀಚಿನ ಉತ್ಪನ್ನವನ್ನು ವೇಗವಾಗಿ ಸಾಗಿಸುವ ಒತ್ತಡವು ಮಾದರಿಯ ಸುರಕ್ಷತೆ(model’s safety)ಯ ಮೇಲೆ ರಾಜಿಗೆ ಕಾರಣವಾಗಬಹುದು ಎಂದು ಆನ್‌ಲೈನ್ ಬಳಕೆದಾರರು ಊಹಿಸಿದ್ದಾರೆ.
ಆಂಥ್ರೋಪಿಕ್ ಸಂಸ್ಥೆಯು ಇತ್ತೀಚೆಗಷ್ಟೇ ತನ್ನ ಸುಧಾರಿತ ಮಾದರಿ ‘ಕ್ಲೌಡ್ ಓಪಸ್ 4.6’ (Claude Opus 4.6) ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಮೃಣಾಂಕ ಶರ್ಮಾ ಅವರು ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ.
ಸಂಸ್ಥೆಯು ಲಾಭ ಮತ್ತು ಮಾರುಕಟ್ಟೆ ಸ್ಪರ್ಧೆಗೆ ಬಿದ್ದು ಸುರಕ್ಷತಾ ಕ್ರಮಗಳನ್ನು ಕಡೆಗಣಿಸುತ್ತಿದೆಯೇ ಎಂಬ ಸಂಶಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆಂಥ್ರೋಪಿಕ್ ಸಂಸ್ಥೆಯು ಪ್ರಸ್ತುತ 350 ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಸಂಗ್ರಹಿಸುವ ಮಾತುಕತೆಯಲ್ಲಿದೆ ಎನ್ನಲಾಗಿದೆ.
ತಜ್ಞರ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ
ಶರ್ಮಾ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ಮತ್ತು ಕಳವಳ ವ್ಯಕ್ತವಾಗಿದೆ. “ಸುರಕ್ಷತೆಯನ್ನು ಕಾಯುವವರು ಮತ್ತು ಆದಾಯದ ಗುರಿ ಹೊಂದಿರುವವರು ಒಂದೇ ಸಂಸ್ಥೆಯಲ್ಲಿದ್ದರೂ ಅವರ ಉದ್ದೇಶಗಳು ಬೇರೆಯಾಗಿರುತ್ತವೆ. ಬೆಳೆಯಬೇಕೆಂಬ ಒತ್ತಡ ಹೆಚ್ಚಾದಾಗ, ಸುರಕ್ಷತಾ ತಜ್ಞರು ಹೋರಾಟ ನಿಲ್ಲಿಸಿ ಹೊರಬರುತ್ತಾರೆ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೂಡಿಕೆದಾರರ ಒತ್ತಡದಿಂದಾಗಿ ತಂತ್ರಜ್ಞರು ನೈತಿಕ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಕೇವಲ ಮಾರಾಟ ಮತ್ತು ಮಾರುಕಟ್ಟೆಯತ್ತ ಗಮನ ಹರಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸರಣಿ ರಾಜೀನಾಮೆಗಳ ಪರ್ವ
ಆಂಥ್ರೋಪಿಕ್ ಸಂಸ್ಥೆಯಿಂದ ಹೊರಬರುತ್ತಿರುವ ಪ್ರಮುಖರಲ್ಲಿ ಮೃಣಾಂಕ ಶರ್ಮಾ ಒಬ್ಬರೇ ಅಲ್ಲ. ಕಳೆದ ವಾರವಷ್ಟೇ ಸಂಶೋಧನಾ ವಿಭಾಗದ ಹರ್ಷ ಮೆಹ್ತಾ ಮತ್ತು ಪ್ರಮುಖ ಎಐ ವಿಜ್ಞಾನಿ ಬೆಹನಮ್ ನೈಶಾಬರ್ ಕೂಡ ಸಂಸ್ಥೆಯನ್ನು ತೊರೆದಿದ್ದಾರೆ. ಎಐ ಸುರಕ್ಷತಾ ವಿಭಾಗದ ಪ್ರಮುಖರು ಸರಣಿಯಾಗಿ ಹೊರಬರುತ್ತಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ