‘ಇದೇ ಈಗಿನ ಸ್ಥಿತಿ’ : ಆತ್ಮಕಥೆ ವಿವಾದದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಜನರಲ್ ನರವಾಣೆ

ನವದೆಹಲಿ: ಭಾರತೀಯ ಭೂಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (Four Stars of Destiny) ಬಿಡುಗಡೆಗೂ ಮುನ್ನವೇ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಮೌನ ಮುರಿದಿರುವ ನರವಾಣೆ, ತಮ್ಮ ಪುಸ್ತಕದ ಪ್ರಕಟಣೆಯ ಕುರಿತು ಅಧಿಕೃತ ಪ್ರಕಾಶಕರಾದ ‘ಪೆಂಗ್ವಿನ್’ ನೀಡಿದ ಹೇಳಿಕೆಯನ್ನು ಮರುಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ಇದು ಪುಸ್ತಕದ ಸದ್ಯದ ಸ್ಥಿತಿ,” ಎಂದು ನರವಾಣೆ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪುಸ್ತಕದ ಅನಧಿಕೃತ ಪ್ರತಿಗಳು ಹರಿದಾಡುತ್ತಿವೆ ಎಂಬ ಸುದ್ದಿಯ ಬೆನ್ನಲ್ಲೇ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾವು ಹೇಳಿಕೆ ಬಿಡುಗಡೆ ಮಾಡಿದ್ದು, ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ಸಂಪೂರ್ಣ ಪ್ರಕಟಣಾ ಹಕ್ಕು ಪೆಂಗ್ವಿನ್ ಸಂಸ್ಥೆಯ ಬಳಿ ಇದೆ.

ಈ ಪುಸ್ತಕವು ಇದುವರೆಗೆ ಯಾವುದೇ ರೂಪದಲ್ಲಿ (ಮುದ್ರಿತ ಅಥವಾ ಡಿಜಿಟಲ್) ಪ್ರಕಟವಾಗಿಲ್ಲ. ಯಾವುದೇ ಪಿಡಿಎಫ್ (PDF) ಅಥವಾ ಡಿಜಿಟಲ್ ಪ್ರತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದರೆ ಅದು ಕಾನೂನುಬಾಹಿರ ಮತ್ತು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಕಾಶಕರು ಪುಸ್ತಕದ ಯಾವುದೇ ಪ್ರತಿಗಳನ್ನು – “ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ – ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ” ಎಂದು ಕಂಪನಿ ಹೇಳಿದೆ.
“ಪ್ರಸ್ತುತ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಅಥವಾ ಭಾಗಶಃ, ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ಇತರ ಸ್ವರೂಪದಲ್ಲಿ, ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ, ಚಲಾವಣೆಯಲ್ಲಿರುವ ಪುಸ್ತಕದ ಯಾವುದೇ ಪ್ರತಿಗಳು ಪಿಆರ್‌ಎಚ್‌ಐನ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಜಕೀಯ ಸಂಘರ್ಷ
ಈ ವಿವಾದವು ಸಂಸತ್ತಿನಲ್ಲೂ ಸದ್ದು ಮಾಡಿದೆ. ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಳೆದ ವಾರ ಸಂಸತ್ತಿನ ಆವರಣದಲ್ಲಿ ಪುಸ್ತಕದ ಪ್ರತಿಯೊಂದನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
“ಸಭಾಪತಿಗಳು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸರ್ಕಾರವು ಈ ಪುಸ್ತಕ ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಪುಸ್ತಕ ಅಸ್ತಿತ್ವದಲ್ಲಿದೆ ಎಂದು ದೇಶದ ಯುವಕರು ತಿಳಿಯಬೇಕಿದೆ,” ಎಂದು ರಾಹುಲ್ ಗಾಂಧಿ ಹೇಳಿದರು.
2020ರಲ್ಲಿ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಮಾಜಿ ಸೇನಾ ಮುಖ್ಯಸ್ಥರು ಈ ಪುಸ್ತಕದಲ್ಲಿ ಸಂಪೂರ್ಣ ವಿವರಗಳನ್ನು ಬರೆದಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ಸಂಸತ್ತಿನಲ್ಲಿ ಈ ಪುಸ್ತಕದ ಭಾಗಗಳನ್ನು ಉಲ್ಲೇಖಿಸಲು ತಮಗೆ ಅನುಮತಿ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್‌ ಗಾಂಧಿ ಫೆಬ್ರವರಿ 2 ರಿಂದ ಲೋಕಸಭೆಯಲ್ಲಿ ಈ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದರು ಆದರೆ ಪುಸ್ತಕವನ್ನು ಔಪಚಾರಿಕವಾಗಿ ಪ್ರಕಟಿಸಲಾಗಿಲ್ಲ ಎಂಬ ಕಾರಣಕ್ಕೆ ಅವರನ್ನು ತಡೆಯಲಾಯಿತು.
ಪೊಲೀಸ್ ತನಿಖೆ ಆರಂಭ
ಅನುಮೋದನೆ ಸಿಗದ ಹಸ್ತಪ್ರತಿಯನ್ನು ಕಾನೂನುಬಾಹಿರವಾಗಿ ವಿತರಿಸಲಾಗುತ್ತಿದೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಈಗಾಗಲೇ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಈ ಸೋರಿಕೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement