ಕೆನಡಾ ಶಾಲೆಯಲ್ಲಿ ಮನಬಂದಂತೆ ಗುಂಡು ಹಾರಿಸಿದ ಮಹಿಳೆ; 10 ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

ಒಟ್ಟಾವ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ‘ಟಂಬ್ಲರ್ ರಿಡ್ಜ್’ (Tumbler Ridge) ಎಂಬಲ್ಲಿರುವ ಪ್ರೌಢಶಾಲೆಯೊಂದರಲ್ಲಿ ಬುಧವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ 10 ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು 1:20ಕ್ಕೆ ಟಂಬ್ಲರ್ ರಿಡ್ಜ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶೂಟರ್‌ ಒಬ್ಬ ಮಹಿಳೆಯಾಗಿದ್ದು, ಆಕೆ ಗೌನ್ ಧರಿಸಿದ್ದಳು ಮತ್ತು ಕಂದು ಬಣ್ಣದ ಕೂದಲನ್ನು ಹೊಂದಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ದಾಳಿಯ ನಂತರ ಶೂಟರ್ ಶಾಲೆಯ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ತಿಳಿಸಿದೆ.
ಗುಂಡಿನ ದಾಳಿಯಲ್ಲಿ ಆರು ಜನರು ಶಾಲೆಯ ಒಳಗಡೆ ಸಾವಿಗೀಡಾಗಿದ್ದಾರೆ ಹಾಗೂ ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇಬ್ಬರು ಸಮೀಪದ ನಿವಾಸವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ (ಇದು ಗುಂಡಿನ ದಾಳಿಗೆ ಸಂಬಂಧಿಸಿದೆ ಎಂದು ಶಂಕಿಸಲಾಗಿದೆ). ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಏರ್‌ಲಿಫ್ಟ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ತಕ್ಷಣ ನಗರದಾದ್ಯಂತ ಎಚ್ಚರಿಕೆ ನೀಡಲಾಗಿತ್ತು. ಸುಮಾರು 2,400 ಜನಸಂಖ್ಯೆ ಇರುವ ಈ ಸಣ್ಣ ಪಟ್ಟಣದ ನಿವಾಸಿಗಳು ಮನೆಯಿಂದ ಹೊರಬರದಂತೆ ಮತ್ತು ಬಾಗಿಲುಗಳನ್ನು ಹಾಕಿಕೊಳ್ಳುವಂತೆ ಸೂಚಿಸಲಾಗಿತ್ತು. ಸುಮಾರು ಐದು ಗಂಟೆಗಳ ನಂತರ ಈ ಆದೇಶವನ್ನು ಹಿಂಪಡೆಯಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಯನ್ನು ಈ ವಾರ ಪೂರ್ತಿ ಮುಚ್ಚಲು ನಿರ್ಧರಿಸಲಾಗಿದೆ.
ಪೊಲೀಸರು ಸದ್ಯ ದಾಳಿಯ ಹಿಂದಿನ ಉದ್ದೇಶವೇನು ಮತ್ತು ಈ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಜನರನ್ನು ಶಾಲೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಆರ್‌ಸಿಎಂಪಿಯ ಉತ್ತರ ಜಿಲ್ಲಾ ಮುಖ್ಯ ಸೂಪರಿಂಟೆಂಡೆಂಟ್ ಕೆನ್ ಫ್ಲಾಯ್ಡ್ ಹೇಳಿದ್ದಾರೆ. ಗುಂಡಿನ ದಾಳಿಗೆ ಕಾರಣವೇನು ಎಂದು ಪೊಲೀಸರಿಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದರು.
ಕೆನಡಾ ಪ್ರಧಾನಿ ಸಂತಾಪ:
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಅವರು ಈ ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. “ಟಂಬ್ಲರ್ ರಿಡ್ಜ್ ಘಟನೆಯಿಂದ ನಾನು ಸ್ತಬ್ಧನಾಗಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಗಳ ಪರವಾಗಿ ಇಡೀ ಕೆನಡಾ ದೇಶವೇ ದುಃಖಿತವಾಗಿದೆ. ಜೀವದ ಹಂಗು ತೊರೆದು ನಾಗರಿಕರನ್ನು ರಕ್ಷಿಸಿದ ತುರ್ತು ಸೇವಾ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement