ಶಿರಸಿ: “ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಕಾಳಿ, ಶರಾವತಿ, ಸೀಬರ್ಡ್ ಹಾಗೂ ಕೈಗಾದಂತಹ ಬೃಹತ್ ಯೋಜನೆಗಳ ಭಾರದಿಂದ ತನ್ನ ಧಾರಣ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಮತ್ತೆ ಹೊಸ ನದಿ ತಿರುವು ಯೋಜನೆಗಳನ್ನು ಹೇರುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ (ಫೆ. 14) ಶಿರಸಿಯಲ್ಲಿ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನಿಯೋಗದ ಜೊತೆ ಸಮಾಲೋಚನೆ ನಡೆಸಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಲು ತಾವು ಜೊತೆಗಿರಬೇಕು ಎಂದು ನಿಯೋಗವು ಅವರಿಗೆ ಮನವಿ ಮಾಡಿತು. ಅವರು ನಿಯೋಗದ ಜೊತೆ ಇರುವುದಾಗಿ ಭರವಸೆ ನೀಡಿದರು.
ಹಳೆಯ ನೆನಪು
1992ರಲ್ಲಿ ದೆಹಲಿಗೆ ತೆರಳಿದ್ದ ನಿಯೋಗವನ್ನು ಸ್ಮರಿಸಿದ ಅವರು, “ಅಂದು ಗುಂಡೂರಾವ್, ರಾಮಕೃಷ್ಣ ಹೆಗಡೆ ಹಾಗೂ ಅಜ್ಜೀಬಾಳ ಅವರಜೊತೆ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿದ್ದೆವು. ನಂತರ ಬೃಹತ್ ಅಣೆಕಟ್ಟು ಯೋಜನೆ ಕೈಬಿಡಲಾಗಿತ್ತು ಎಂದು ಅವರು ನೆನಪಿಸಿಕೊಂಡರು. ಇತ್ತೀಚೆಗೆ ಶಿರಸಿಯಲ್ಲಿ ನಡೆದ ಬೇಡ್ತಿ ಸಮಾವೇಶಕ್ಕೂ ನಾನು ಬೆಂಬಲ ಸೂಚಿಸಿದ್ದೆ,” ಎಂದರು.
ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದರ್ಶನ ಪಡೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೇಡ್ತಿ-ಅಘನಾಶಿನಿ ಸಮಿತಿಯ ಅನಂತ ಹೆಗಡೆ ಅಶೀಸರ, ಪ್ರಮುಖರಾದ ನಾರಾಯಣ ಗಡಿಕೈ, ದೀಪಕ ದೊಡ್ಡೂರು, ಗಣಪತಿ ಕೆ., ವಿಶ್ವೇಶ್ವರ ಭಟ್, ನಿತಿನ್ ಕಾಸರಕೋಡ, ಜಿ.ವಿ. ಹೆಗಡೆ, ನಾಗರಾಜ ನಾರ್ವೇಕರ ಮೊದಲಾದವರು ಇದ್ದರು. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ