ಕ್ಯಾಲಿಫೋರ್ನಿಯಾದಲ್ಲಿ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

ನವದೆಹಲಿ: ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ ಎಂದು ಗುರುತಿಸಲಾಗಿದೆ. ಇವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಬರ್ಕ್ಲಿ) ಕೆಮಿಕಲ್ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 9 ರಿಂದ ನಾಪತ್ತೆಯಾಗಿದ್ದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ಪೊಲೀಸರು ಸಾಕೇತ್ ಅವರ ಮೃತದೇಹವನ್ನು ಪತ್ತೆಹಚ್ಚಿರುವುದನ್ನು ಖಚಿತಪಡಿಸಿದೆ. ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದೆ. “ಈ ಅತ್ಯಂತ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ” ಎಂದು ದೂತಾವಾಸದ ಹೇಳಿಕೆ ತಿಳಿಸಿದೆ.
ಹುಡುಕಾಟ ಮತ್ತು ಶೋಧ ಕಾರ್ಯ
ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕೊನೆಯ ಬಾರಿಗೆ ಕಂಡುಬಂದಿದ್ದ ಸಾಕೇತ್ ಅವರ ಪತ್ತೆಗಾಗಿ ಲೇಕ್ ಅಂಜಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ನಂತರ, ಕ್ಯಾಂಪಸ್ ಸಮೀಪದ ಟಿಲ್ಡೆನ್ ರೀಜನಲ್ ಪಾರ್ಕ್ ಹತ್ತಿರದ ಮನೆಯೊಂದರ ಬಳಿ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಪತ್ತೆಯಾಗಿತ್ತು. ಸಾಮಾಜಿಕ ಜಾಲತಾಣ ‘ರೆಡ್ಡಿಟ್’ ಮೂಲಕವೂ ಸ್ಥಳೀಯರು ಮತ್ತು ಸಮುದಾಯದ ಸದಸ್ಯರು ಅವರ ಪತ್ತೆಗಾಗಿ ದೊಡ್ಡ ಮಟ್ಟದ ಪ್ರಯತ್ನ ನಡೆಸಿದ್ದರು.
ಪ್ರತಿಭಾವಂತ ವಿದ್ಯಾರ್ಥಿ
ಸಾಕೇತ್ ಶ್ರೀನಿವಾಸಯ್ಯ ಅವರು ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಬರ್ಕ್ಲಿಯಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ವ್ಯಾಸಂಗ ಮಾಡುತ್ತಿದ್ದರು. ಇವರು ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್ನಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ‘ಹೈಪರ್ ಲೂಪ್‌ಗಾಗಿ ಮೈಕ್ರೋಚಾನಲ್ ಕೂಲಿಂಗ್ ಸಿಸ್ಟಮ್’ ಸಂಶೋಧನೆಗಾಗಿ ಪೇಟೆಂಟ್ ಹೊಂದಿದ್ದ ಆರು ಮಂದಿಯಲ್ಲಿ ಇವರೂ ಒಬ್ಬರಾಗಿದ್ದರು. ಸಾಕೇತ್ ಅವರು ತೀಕ್ಷ್ಣ ಬುದ್ಧಿವಂತಿಕೆ, ವಿನಯ ಮತ್ತು ನಿಷ್ಠಾವಂತ ಗುಣದವರಾಗಿದ್ದರು ಎಂದು ಅವರ ಆಪ್ತರು ಸ್ಮರಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement