ವೀಡಿಯೊ…| ರೈಲ್ವೆ ಹಳಿಯ ಮೇಲೆ ಮಲಗಿದ್ದ ಕುಡುಕ ; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಮುಂಬೈ: ಇಲ್ಲಿನ ಜನನಿಬಿಡ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಭೀಕರ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕುಡಿದ ಅಮಲಿನಲ್ಲಿ ಯುವಕನೊಬ್ಬ ಹಳಿಯ ಮೇಲೆ ಮಲಗಿದ್ದರಿಂದ ಲೋಕಲ್ ರೈಲನ್ನು ತುರ್ತಾಗಿ ನಿಲ್ಲಿಸಬೇಕಾಯಿತು.
ಸೋಮವಾರ ಮಧ್ಯಾಹ್ನ ಸುಮಾರು 3:20ರ ವೇಳೆಗೆ, ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಲೋಕಲ್ ರೈಲು (ಸಂಖ್ಯೆ 1169, V-36) ಆಗಮಿಸುತ್ತಿತ್ತು. ಈ ವೇಳೆ ಹಳಿಯ ಮೇಲೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಗಮನಿಸಿದ ಮೋಟಾರ್‌ಮ್ಯಾನ್ (ರೈಲು ಚಾಲಕ), ತಕ್ಷಣವೇ ಸತತವಾಗಿ ಹಾರ್ನ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೂ ಆ ವ್ಯಕ್ತಿ ಏಳದ ಕಾರಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲು ಚಾಲಕ, ಸಮಯಪ್ರಜ್ಞೆ ಮೆರೆದು ವ್ಯಕ್ತಿಯ ತೀರಾ ಹತ್ತಿರದಲ್ಲಿ ರೈಲನ್ನು ಯಶಸ್ವಿಯಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.

ಸ್ಥಳದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ವಿವೇಕ್ ಮತ್ತು ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಚಿಟ್ಟೆ ತಕ್ಷಣವೇ ಹಳಿಯತ್ತ ಧಾವಿಸಿದರು. ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯನ್ನು 18 ವರ್ಷದ ಅವಿನಾಶ ಎಂದು ಗುರುತಿಸಲಾಗಿದೆ. ಈತ CSMT ಬಸ್ ನಿಲ್ದಾಣದ ಸಮೀಪದ ಫುಟ್‌ಪಾತ್ ಮೇಲೆ ವಾಸಿಸುವ ನಿವಾಸಿ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈತ ಹಳಿಯ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಆರಿಸಲು ರೈಲ್ವೆ ಹಳಿಯ ಪ್ರದೇಶಕ್ಕೆ ಪ್ರವೇಶಿಸಿದ್ದ. ಆದರೆ ವಿಪರೀತ ಮದ್ಯಪಾನ ಮಾಡಿದ್ದರಿಂದ, ಆತ ಅಮಲಿನಲ್ಲಿ ಅಲ್ಲಿಯೇ ನಿದ್ದೆಗೆ ಜಾರಿದ್ದ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

ರೈಲ್ವೆ ರಕ್ಷಣಾ ಪಡೆಯ (RPF) ಸಿಬ್ಬಂದಿ ಕೂಡಲೇ ಆತನನ್ನು ಹಳಿಯಿಂದ ಎಬ್ಬಿಸಿಅಲ್ಲಿಂದ ಕರೆದೊಯ್ದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲೂ ಆತ ಪೂರ್ಣ ಪ್ರಮಾಣದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 147 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement