ಪ್ರೇಮಿಗಳ ದಿನ : ಗುಲಾಬಿ ರಫ್ತಿನಲ್ಲಿ ಬೆಂಗಳೂರು ಏರ್‌ಪೋರ್ಟ್ ದಾಖಲೆ…!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಈ ಬಾರಿಯ ವ್ಯಾಲೆಂಟೈನ್ಸ್ ಸೀಸನ್‌ನಲ್ಲಿ ಗುಲಾಬಿ ರಫ್ತಿನಲ್ಲಿ ಭರ್ಜರಿ ಸಾಧನೆ ಮಾಡಿದೆ. ಸುಮಾರು 6 ಕೋಟಿ (60 ಮಿಲಿಯನ್) ಗುಲಾಬಿ ಹೂವುಗಳನ್ನು ವಿಶ್ವದ 26 ದೇಶಗಳಿಗೆ ರವಾನಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು 2,700 ಟನ್‌ಗಳಿಗೂ ಹೆಚ್ಚು ಗುಲಾಬಿಗಳ ರಫ್ತು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ 38% ಮತ್ತು ತೂಕದಲ್ಲಿ 64% ರಷ್ಟು ಏರಿಕೆ ಕಂಡುಬಂದಿದೆ. ಸತತ ಐದನೇ ವರ್ಷವೂ ‘ಪರಿಶಬಲ್ ಎಕ್ಸ್‌ಪೋರ್ಟ್ಸ್’ (ಬೇಗನೆ ಹಾಳಾಗುವ ವಸ್ತುಗಳ ರಫ್ತು) ವಿಭಾಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ದೇಶದಲ್ಲೇ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆ
ಬೆಂಗಳೂರಿನ ಗುಲಾಬಿಗಳಿಗೆ ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್ ಇದ್ದು, ಪ್ರಮುಖವಾಗಿ ವಿದೇಶಗಳ ಹಲವಾರು ನಗರಗಳಿಗೆ ರವಾನೆಯಾಗಿವೆ.
ವಿದೇಶಿ ನಗರಗಳಲ್ಲಿ ಸಿಂಗಾಪುರವು ಬೇಡಿಕೆಯಲ್ಲಿ ಮುಂಚೂಣಿಯಲ್ಲಿದೆ, ನಂತರ ಕೌಲಾಲಂಪುರ, ಅಬುಧಾಬಿ ಮತ್ತು ನ್ಯೂಯಾರ್ಕ್‌ನಂತಹ ಪ್ರಮುಖ ನಗರಗಳಾಗಿವೆ. ಈ ಋತುವಿನಲ್ಲಿ ಗುಲಾಬಿ ಹೂವು ರಫ್ತಾದ ನಗರಗಳಲ್ಲಿ ಲಾಸ್ ಏಂಜಲೀಸ್, ಲಂಡನ್ ಗ್ಯಾಟ್ವಿಕ್ ಮತ್ತು ಒರ್ಲ್ಯಾಂಡೊ ಸೇರಿದಂತೆ ಅಂತಾರಾಷ್ಟ್ರೀಯ ತಾಣಗಳಲ್ಲಿ ಹೊಸದಾಗಿ ಸೇರಿಕೊಂಡಿವೆ.

ದೇಶೀಯ ಮಾರುಕಟ್ಟೆಯಲ್ಲೂ ನಾಗಾಲೋಟ
ಭಾರತದ ಹಲವಾರು ನಗರಗಳಿಗೂ ಬೆಂಗಳೂರು ವಿಮಾನ ನಿಲ್ದಾಣವು 2,402 ಟನ್ ಗುಲಾಬಿಗಳನ್ನು ರವಾನಿಸಿದೆ, ಇದು ಕಳೆದ ವರ್ಷದ ಅಂಕಿಅಂಶಗಳಿಗಿಂತ ಗಮನಾರ್ಹವಾದ 79% ಹೆಚ್ಚಳವಾಗಿದೆ. ದೆಹಲಿ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳು ಮೊದಲ ಸ್ಥಾನದಲ್ಲಿವೆ. ಮುಂಬೈ ಮತ್ತು ಚಂಡೀಗಢದಂತಹ ನಗರಗಳಲ್ಲಿ ಹೆಚ್ಚಿನ ಬೇಡಿಕೆಗಳು ಬಂದಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಸುಧಾರಿತ ‘ಕೋಲ್ಡ್ ಚೈನ್ ಇನ್ಫ್ರಾಸ್ಟ್ರಕ್ಚರ್’ (ಶೈತ್ಯೀಕರಣ ವ್ಯವಸ್ಥೆ) ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಹೂವುಗಳು ಬಾಡದಂತೆ, ಅತಿ ಹೆಚ್ಚಿನ ತಾಜಾತನದೊಂದಿಗೆ ಗ್ರಾಹಕರನ್ನು ತಲುಪುತ್ತಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement