ಹ್ಯಾಮರ್ ಕ್ಷಿಪಣಿ ಉತ್ಪಾದನೆಯಿಂದ ಹಿಡಿದು M88 ಎಂಜಿನ್‌ಗಳ ವರೆಗೆ…: ಭಾರತ- ಫ್ರಾನ್ಸ್ ಐತಿಹಾಸಿಕ ರಕ್ಷಣಾ ಒಪ್ಪಂದ

ನವದೆಹಲಿ : ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಿನ ರಕ್ಷಣಾ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿದೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ 6ನೇ ವಾರ್ಷಿಕ ರಕ್ಷಣಾ ಸಂವಾದದಲ್ಲಿ ಉಭಯ ದೇಶಗಳು ತಮ್ಮ 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದವನ್ನು ನವೀಕರಿಸಿವೆ. ಇದರ ಜೊತೆಗೆ, ಅತ್ಯಾಧುನಿಕ ‘ಹ್ಯಾಮರ್’ (HAMMER) ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
10 ವರ್ಷಗಳ ಒಪ್ಪಂದ ನವೀಕರಣ: ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ನಡುವೆ ನಡೆದ ಮಾತುಕತೆಯಲ್ಲಿ ಮುಂದಿನ ಒಂದು ದಶಕದ ರಕ್ಷಣಾ ಸಹಕಾರಕ್ಕೆ ಮರುಚಾಲನೆ ನೀಡಲಾಯಿತು.
ಹ್ಯಾಮರ್ ಕ್ಷಿಪಣಿ ಉತ್ಪಾದನೆ: ಭಾರತದ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ (BEL) ಮತ್ತು ಫ್ರಾನ್ಸ್‌ನ ‘ಸಫ್ರಾನ್’ (Safran) ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ರಫೇಲ್ ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಹ್ಯಾಮರ್ ಕ್ಷಿಪಣಿಗಳನ್ನು ಇನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುತ್ತದೆ. ವಾಯುಪಡೆಯ ಬಲವರ್ಧನೆಗಾಗಿ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ 3.25 ಲಕ್ಷ ಕೋಟಿ ರೂ.ಗಳ ಬೃಹತ್ ಒಪ್ಪಂದದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಮೇಕ್ ಇನ್ ಇಂಡಿಯಾಗೆ ಒತ್ತು:
ರಫೇಲ್ ಯುದ್ಧ ವಿಮಾನಗಳಲ್ಲಿ ಬಳಕೆಯಾಗುವ ಬಿಡಿಭಾಗಗಳಲ್ಲಿ ಶೇ. 50ರಷ್ಟು ಭಾರತೀಯ ನಿರ್ಮಿತವಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರತಿಪಾದಿಸಿದ್ದಾರೆ. ಒಟ್ಟು 114 ಜೆಟ್‌ಗಳ ಪೈಕಿ 18 ನೇರವಾಗಿ ಫ್ರಾನ್ಸ್‌ನಿಂದ ಬರಲಿದ್ದು, ಉಳಿದ 96 ಜೆಟ್‌ಗಳನ್ನು ಭಾರತದಲ್ಲೇ ತಯಾರಿಸಲು ಉದ್ದೇಶಿಸಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರವನ್ನು ವಿಸ್ತರಿಸಲು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO)ಯು ಫ್ರಾನ್ಸ್‌ನ ಡೈರೆಕ್ಟರೇಟ್ ಜನರಲ್ ಆಫ್ ಆರ್ಮಮೆಂಟ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಮೂರು ತಿಂಗಳ ನಂತರ ಈ ಒಪ್ಪಂದವನ್ನು ನವೀಕರಿಸಲಾಗಿದೆ.
ಈ ಒಪ್ಪಂದವು ವೈಮಾನಿಕ ಪ್ಲಾಟ್‌ಫಾರ್ಮ್‌ಗಳು, ಮಾನವರಹಿತ ವಾಹನಗಳು, ಸುಧಾರಿತ ರಕ್ಷಣಾ ಸಾಮಗ್ರಿಗಳು, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಸಂಚರಣೆ, ಸುಧಾರಿತ ಪ್ರೊಪಲ್ಷನ್, ಸುಧಾರಿತ ಸಂವೇದಕಗಳು ಮತ್ತು ನೀರೊಳಗಿನ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ತಾಂತ್ರಿಕ ಸಹಕಾರದ ವಿಸ್ತರಣೆ:
ಈ ಒಪ್ಪಂದವು ಕೇವಲ ಕ್ಷಿಪಣಿಗಳಿಗೆ ಸೀಮಿತವಾಗದೆ ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಾಗರದಾಳದ ತಂತ್ರಜ್ಞಾನಗಳ ಸಂಶೋಧನೆಯನ್ನೂ ಒಳಗೊಂಡಿದೆ. ಅಲ್ಲದೆ, ರಫೇಲ್‌ನ ಎಂ88 ಎಂಜಿನ್‌ಗಳನ್ನು ಭಾರತದಲ್ಲೇ ಜೋಡಿಸುವ ಮತ್ತು ದುರಸ್ತಿ ಮಾಡುವ ಘಟಕವನ್ನು ಸ್ಥಾಪಿಸಲು ಸಫ್ರಾನ್ ಸಂಸ್ಥೆ ಸಮ್ಮತಿಸಿದೆ. ಎಚ್‌ಎಎಲ್‌ (HAL) ಮತ್ತು ಸಫ್ರಾನ್ ಭಾರತದಲ್ಲಿ ನಿರ್ಣಾಯಕ ಏರೋ-ಎಂಜಿನ್ ಭಾಗಗಳ ಉತ್ಪಾದನೆಗೆ ಒಪ್ಪಂದಗಳಿಗೆ ಸಹಿ ಹಾಕಿವೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಈಗಾಗಲೇ ಡಸಾಲ್ಟ್ ಜೊತೆ ಭಾರತದಲ್ಲಿ ರಫೇಲ್ ಫ್ಯೂಸ್‌ಲೇಜ್ ಸೆಕ್ಷನ್‌ಗಳನ್ನು ತಯಾರಿಸಲು ಪಾಲುದಾರಿಕೆ ಹೊಂದಿದೆ. “ಭಾರತದಲ್ಲಿ ತಯಾರಿಸಿದ” ಫೈಟರ್ ಜೆಟ್‌ಗಳನ್ನು ಸಪೋರ್ಟ್‌ ಮಾಡಲು ಈ ಉತ್ಪಾದನೆಯು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.
ಸೇನೆಗಳ ನಡುವೆ ಪರಸ್ಪರ ಸಹಕಾರ:
ಇದೇ ಮೊದಲ ಬಾರಿಗೆ ಭಾರತೀಯ ಭೂಸೇನೆ ಮತ್ತು ಫ್ರಾನ್ಸ್‌ನ ಭೂಸೇನೆಯ ಅಧಿಕಾರಿಗಳನ್ನು ಪರಸ್ಪರರ ಸೇನಾ ಕೇಂದ್ರಗಳಲ್ಲಿ ನಿಯೋಜಿಸಲು (Reciprocal Deployment) ನಿರ್ಧರಿಸಲಾಗಿದೆ. ಇದು ಉಭಯ ದೇಶಗಳ ನಡುವಿನ ಸಮರ ಕೌಶಲಗಳ ವಿನಿಮಯಕ್ಕೆ ಹೆಚ್ಚಿನ ಬಲ ನೀಡಲಿದೆ.
ಈ ಐತಿಹಾಸಿಕ ಒಪ್ಪಂದವು ಭಾರತದ ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರತೆ’ ಸಾಧಿಸಲು ಮತ್ತು ಜಾಗತಿಕವಾಗಿ ಭಾರತದ ಸೈನಿಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement