ಬೆಂಗಳೂರು : ಸ್ನೇಹಿತನಿಗೆ ಬ್ಯಾಂಕ್‌ ವಿವರ ನೀಡಿ 7 ಕೋಟಿ ರೂ. ವಂಚನೆ ಜಾಲದಲ್ಲಿ ಸಿಲುಕಿದ ವಿದ್ಯಾರ್ಥಿ…!

ಬೆಂಗಳೂರು: ತನ್ನ ಸ್ನೇಹಿತನನ್ನು ಅತಿಯಾಗಿ ನಂಬಿದ್ದು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ ಪಾಲಿಗೆ ಅದೇ ದುಸ್ವಪ್ನವಾಗಿ ಪರಿಣಮಿಸಿದೆ. ಸ್ನೇಹಿತನಿಗೆ ಸಹಾಯ ಮಾಡಲು ಹೋದ ಈತ ಈಗ ಕೋಟ್ಯಂತರ ರೂಪಾಯಿಗಳ ಸೈಬರ್ ಹಗರಣದಲ್ಲಿ ಸಿಲುಕಿಕೊಂಡಿದ್ದಾನೆ. ಈ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಸೈಬರ್ ವಂಚಕರು ಬರೋಬ್ಬರಿ 7 ಕೋಟಿ ರೂಪಾಯಿ ವಂಚನೆಗೆ ಬಳಸಿಕೊಂಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರು ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗೆ ಇತ್ತೀಚೆಗೆ ಆಯುಷ್ ಎಂಬಾತನ ಪರಿಚಯವಾಗಿತ್ತು. ನಂತರ ಇವರಿಬ್ಬರು ಒಂದೇ ವರ್ಷದಲ್ಲಿ ಆಪ್ತ ಸ್ನೇಹಿತರಾಗಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು

. ಆದರೆ ಒಂದು ದಿನ ಆಯುಷ್ ತನಗೆ ಸಹಾಯ ಮಾಡುವಂತೆ ಕೋರಿ ಈ ವಿದ್ಯಾರ್ಥಿಯ ಬಳಿ ಬಂದಿದ್ದ.
ತನ್ನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ (Balance) ಸಹ ಇಲ್ಲದ ಕಾರಣ ಖಾತೆ ಬ್ಲಾಕ್ ಆಗಿದೆ ಎಂದು ನಂಬಿಸಿದ ಈತ, ತಾತ್ಕಾಲಿಕವಾಗಿ ವಿದ್ಯಾರ್ಥಿಯ ಖಾತೆಯನ್ನು ಬಳಸಲು ಅನುಮತಿ ಕೇಳಿದ್ದ. ಸ್ನೇಹಿತನನ್ನು ಪೂರ್ಣವಾಗಿ ನಂಬಿದ ವಿದ್ಯಾರ್ಥಿ, ತನ್ನ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್, ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಎಲ್ಲವನ್ನೂ ಆತನಿಗೆ ಕಳುಹಿಸಿದ್ದ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಬ್ಯಾಂಕ್‌ನಿಂದ ಬಂದ ಎಚ್ಚರಿಕೆ ಸಂದೇಶ
ತನ್ನ ಖಾತೆಯ ವಿವರಗಳನ್ನು ಹಂಚಿಕೊಂಡ ಸುಮಾರು 7 ತಿಂಗಳ ನಂತರ, ವಿದ್ಯಾರ್ಥಿಯ ಖಾತೆಯ ಮೂಲಕ ಭಾರಿ ಮೊತ್ತದ ಅಕ್ರಮ ವಹಿವಾಟುಗಳು ನಡೆದಿವೆ ಎಂದು ಬ್ಯಾಂಕ್ ತಿಳಿಸಿದಾಗ ಆತ ಬೆಚ್ಚಿಬಿದ್ದಿದ್ದಾನೆ. ಆ ವಿದ್ಯಾರ್ಥಿಯ ಖಾತೆಯ ಮೂಲಕ ಸುಮಾರು 7 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಖಾತೆಯನ್ನು ತಕ್ಷಣವೇ ಸ್ಥಗಿತ(Block)ಗೊಳಿಸಲಾಗಿದೆ .
ತನ್ನ ಖಾತೆಯನ್ನು ಸೈಬರ್ ಅಪರಾಧಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿದ ತಕ್ಷಣ ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ್ದಾನೆ. ವಂಚನೆಯ ವಹಿವಾಟು ನಡೆಸಿದ ಆರೋಪದ ಮೇಲೆ ಆಯುಷ್ ಮತ್ತು ಇತರರ ವಿರುದ್ಧ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement