ಪಶ್ಚಿಮ ಬಂಗಾಳದ ‘ರಾಜಕೀಯ ಚಾಣಕ್ಯ’ ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸ್ಥಾಪಕ ಸದಸ್ಯ ಹಾಗೂ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ (71) ಅವರು ಸೋಮವಾರ ಮುಂಜಾನೆ ಸಾಲ್ಟ್ ಲೇಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ನಂಬಿಕಸ್ತ ಒಡನಾಡಿ ಹಾಗೂ ಪಕ್ಷದ ಪ್ರಧಾನ ತಂತ್ರಗಾರ ಎಂದೇ ಗುರುತಿಸಿಕೊಂಡಿದ್ದ ಮುಕುಲ್‌ ರಾಯ್, ಕಳೆದ ಎರಡು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇತ್ತೀಚೆಗೆ ಕೋಮಾ ಸ್ಥಿತಿಗೆ ತಲುಪಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪುತ್ರ ಸುಭ್ರಾಂಶು ರಾಯ್ ಅವರನ್ನು ಅಗಲಿದ್ದಾರೆ.
ಮುಕುಲ್ ರಾಯ್ ಅವರ ನಾಲ್ಕು ದಶಕಗಳ ರಾಜಕೀಯ ಪಯಣ ವೈವಿಧ್ಯಮಯವಾಗಿತ್ತು.1998ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ತೊರೆದಾಗ ಅವರ ಜೊತೆ ನಿಂತು ಟಿಎಂಸಿ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಯುಪಿಎ-2 ಸರ್ಕಾರದ ಅವಧಿಯಲ್ಲಿ ಶಿಪ್ಪಿಂಗ್ ರಾಜ್ಯ ಸಚಿವರಾಗಿ ಮತ್ತು ನಂತರ 2012 ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಘಟನಾ ಚತುರತೆಗೆ ಹೆಸರಾಗಿದ್ದ ಇವರನ್ನು ಪಶ್ಚಿಮ ಬಂಗಾಳ ರಾಜಕಾರಣದ ‘ಚಾಣಕ್ಯ’ ಎಂದು ಕರೆಯಲಾಗುತ್ತಿತ್ತು. 2011ರಲ್ಲಿ ಎಡರಂಗದ 34 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸುವಲ್ಲಿ ಇವರ ತಂತ್ರಗಾರಿಕೆ ಪ್ರಮುಖವಾಗಿತ್ತು.
2017 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಯ್, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ 2021 ರ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಟಿಎಂಸಿಗೆ ಮರಳಿದ್ದರು.
ಆದಾಗ್ಯೂ, ಅವರ ವೃತ್ತಿಜೀವನವು ವಿವಾದಗಳಿಂದ ಮುಕ್ತವಾಗಿರಲಿಲ್ಲ. ಶಾರದಾ ಚಿಟ್ ಫಂಡ್ ಪ್ರಕರಣ ಮತ್ತು ನಾರದ ಕುಟುಕು ಕಾರ್ಯಾಚರಣೆಯಲ್ಲಿ ಅವರ ಹೆಸರು ಕಾಣಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement