ಟಿ20 ವಿಶ್ವಕಪ್ | ಜಿಂಬಾಬ್ವೆ ವಿರುದ್ಧ ವಿಂಡೀಸ್‌ಗೆ ಭರ್ಜರಿ ಜಯ ; ಭಾರತದ ‘ಸೆಮಿಫೈನಲ್‌’ ಹಾದಿ ಕಠಿಣ : ಆದ್ರೂ ಇದೆ ಛಾನ್ಸ್ ; ಲೆಕ್ಕಾಚಾರವೇನು ?

ಮುಂಬೈ: ಟಿ20 ವಿಶ್ವಕಪ್‌ನ ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ವಿರುದ್ಧ ದಾಖಲಿಸಿದ 107 ರನ್‌ಗಳ ಬೃಹತ್ ಗೆಲುವು, ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶಿಸುವ ಹಾದು ಮತ್ತಷ್ಟು ದುರ್ಗಮವಾಗಿದೆ. ಸೋಮವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಅಬ್ಬರಿಸುವ ಮೂಲಕ ಗ್ರೂಪ್-1ರ ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಿಂದಿಕ್ಕಿ  ಅಗ್ರ ಸ್ಥಾನಕ್ಕೆ ಏರಿದೆ. ಜೊತೆಗೆ ತನ್ನ ನೆಟ್ ರನ್ ರೇಟ್ (NRR)ನಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಸಿಮ್ರಾನ್ ಹಟ್ಮೆಯರ್ ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಹಟ್ಮೆಯರ್ ಕೇವಲ 34 ಎಸೆತಗಳಲ್ಲಿ 85 ರನ್ ಸಿಡಿಸಿದರೆ, ನಾಯಕ ರೋವ್‌ಮನ್ ಪೊವೆಲ್ ಮಿಂಚಿನ ಅರ್ಧಶತಕ ಬಾರಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ, ಗುಡಕೇಶ್ ಮೋಟಿ (4 ವಿಕೆಟ್) ಅವರ ಸ್ಪಿನ್ ಜಾಲಕ್ಕೆ ಸಿಲುಕಿ ಅಲ್ಪ ಮೊತ್ತಕ್ಕೆ ಕುಸಿಯಿತು. ವೆಸ್ಟ್‌ ಇಂಡೀಸ್‌ 107 ರನ್‌ಗಳ ಬೃಹತ್ ಜಯ ದಾಖಲಿಸಿತು. ಈ ಗೆಲುವು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಭಾರತದ ಮುಂದಿರುವ ಸವಾಲುಗಳೇನು?
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೋತು ಹಿನ್ನಡೆ ಅನುಭವಿಸಿರುವ ಭಾರತದ ನೆಟ್ ರನ್ ರೇಟ್ ಪ್ರಪಾತಕ್ಕೆ ಬಿದ್ದಿದೆ (-3.800). ಈಗ ವೆಸ್ಟ್ ಇಂಡೀಸ್‌ನ ಈ ಬೃಹತ್ ಗೆಲುವಿನಿಂದಾಗಿ, ಭಾರತ ಮುಂದಿನ ಪಂದ್ಯಗಳನ್ನು ಕೇವಲ ಗೆದ್ದರೆ ಸಾಲದು, ಅತಿದೊಡ್ಡ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ
ಮುಂಬರುವ ಪಂದ್ಯಗಳಲ್ಲಿ ಪ್ರತಿಯೊಂದು ಶಾಟ್, ಪ್ರತಿ ವಿಕೆಟ್ ಮತ್ತು ಪ್ರತಿಯೊಂದು ಕಾರ್ಯತಂತ್ರವೂ ಭಾರತಕ್ಕೆ ಮಹತ್ವದ್ದಾಗಿದೆ ಹಾಗೂ ಸೆಮಿ ಫೈನಲ್‌ ಪ್ರವೇಶ ಪಡೆಯಲು ನಿರ್ಣಾಯಕವಾಗಿದೆ. ವೆಸ್ಟ್ ಇಂಡೀಸ್ ಗುಂಪಿನಲ್ಲಿ ಮುನ್ನಡೆ ಸಾಧಿಸಿರುವುದರಿಂದ, ಭಾರತಕ್ಕೆ ಗೆಲುವಷ್ಟೇ ಮುಖ್ಯವಾಗುವುದಿಲ್ಲ,  ನಿವ್ವಳ ರನ್ ರೇಟ್‌ ಸಹ ಗೆಲುವಿನಷ್ಟೇ ನಿರ್ಣಾಯಕವಾಗಿರುತ್ತದೆ.
ಭಾರತವು ಟಿ 20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಕಾರಣವಾಗುವ ಸನ್ನಿವೇಶಗಳ ಒಂದು ನೋಟ ಇಲ್ಲಿದೆ –
ಸೆಮಿಫೈನಲ್ ತಲುಪಲು ಭಾರತದ ಮುಂದಿರುವ ಲೆಕ್ಕಾಚಾರಗಳು:
ಸನ್ನಿವೇಶ 1: ಉಳಿದ ಎರಡೂ ಪಂದ್ಯಗಳಲ್ಲಿ ಭಾರತ ಗೆಲುವು ಪಡೆಯಬೇಕು. ಭಾರತವು ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ. ಆದರೆ ದಕ್ಷಿಣ ಆಫ್ರಿಕಾ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲಬೇಕು, ಆಗ ಭಾರತ ಎರಡನೇ ತಂಡವಾಗಿ ಸೆಮಿ ಫೈನಲ್‌ಗೆ ಹೋಗಬಹುದು.
ಒಂದು ವೇಳೆ ದಕ್ಷಿಣ ಆಫ್ರಿಕಾವು ವೆಸ್ಟ್ ಇಂಡೀಸ್ ವಿರುದ್ಧ ಸೋತರೆ, ಭಾರತ, ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಮೂರೂ ತಂಡಗಳು ತಲಾ 4 ಅಂಕ ಪಡೆಯುತ್ತವೆ. ಆಗ ನೆಟ್ ರನ್ ರೇಟ್ (NRR) ಆಧಾರದ ಮೇಲೆ ಯಾರು ಸೆಮಿ ಫೈನಲ್‌ಗೆ ಹೋಗುತ್ತಾರೆ ಎಂಬುದು ನಿರ್ಧಾರವಾಗುತ್ತದೆ
ಸನ್ನಿವೇಶ 2: ಒಂದು ಪಂದ್ಯದಲ್ಲಿ ಸೋಲು, ಒಂದರಲ್ಲಿ ಗೆಲುವು
ಒಂದು ವೇಳೆ ದಕ್ಷಿಣ ಆಫ್ರಿಕಾ ಉಳಿದ ಎಲ್ಲ ಪಂದ್ಯಗಳಲ್ಲಿ ಗೆದ್ದು, ಭಾರತವು ಜಿಂಬಾಬ್ವೆ ವಿರುದ್ಧ ಸೋತು, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಲಿದೆ. ಆಗ ಜಿಂಬಾಬ್ವೆ, ವಿಂಡೀಸ್ ಮತ್ತು ಭಾರತ ತಲಾ 2 ಅಂಕಗಳೊಂದಿಗೆ ಸಮಬಲ ಸಾಧಿಸುತ್ತವೆ. ಇಲ್ಲೂ ಕೂಡ ರನ್ ರೇಟ್ ಮುಖ್ಯವಾಗುತ್ತದೆ. ಆದರೆ ಆಫ್ರಿಕಾ ತನ್ನೆಲ್ಲಾ ಪಂದ್ಯಗಳನ್ನು ಸೋತರೆ ಭಾರತದ ಪಡೆಯ ಹಾದಿ ಮುಚ್ಚಲಿದೆ. ಹೀಗಾಗಿ ಇಲ್ಲಿ ಗೆಲುವಷ್ಟೇ ಅಲ್ಲ, ಭಾರತಕ್ಕೆ ಗೆಲುವಿನ ಅಂತರ ಹಾಗೂ ರನ್‌ ರೇಟ್‌ ಸಹ ಮುಖ್ಯವಾಗುತ್ತದೆ.
ಗುಂಪು 1 ರಲ್ಲಿ ಉಳಿದಿರುವ T20 ವಿಶ್ವಕಪ್ ಸೂಪರ್ 8 ಪಂದ್ಯಗಳು
ಫೆಬ್ರವರಿ 26-ಭಾರತ vs ಜಿಂಬಾಬ್ವೆ  (ಚೆನ್ನೈ)
ಫೆಬ್ರವರಿ 26-ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಅಹಮದಾಬಾದ್)
ಮಾರ್ಚ್ 1-ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ (ದೆಹಲಿ)
ಮಾರ್ಚ್ 1-ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement