ಕಪ್ಪೆಕೆರೆ ಸೇರಿ ಮೂವರು ಸಾಧಕರು ಯಕ್ಷಮಂಗಳ ಪ್ರಶಸ್ತಿಗೆ ಆಯ್ಕೆ, ಕೃಷ್ಣಪ್ರಕಾಶರಿಗೆ ಕೃತಿ ಪ್ರಶಸ್ತಿ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣಪ್ರಕಾಶ ಉಳಿಯತ್ತಾಯ ಅವರ ‘ಬಲಿಪ ಮಾರ್ಗ ಹಾಗೂ ಅಗರಿಮಾರ್ಗ’ ಕೃತಿಯು ಆಯ್ಕೆಯಾಗಿದೆ.
ಯಕ್ಷಮಂಗಳ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿ 10,000 ರೂ ನಗದು, ಪ್ರಶಸ್ತಿ, ಸ್ಮರಣಿಕೆಗಳನ್ನೊಳಗೊಂಡಿದೆ.
ಕಪ್ಪೆಕೆರೆ ಸುಬ್ರಾಯ ಭಾಗವತರು
ಕಪ್ಪೆಕೆರೆ ಸುಬ್ರಾಯ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ತಲೆಮಾರಿನ ಅಗ್ರಮಾನ್ಯ ಭಾಗವತರಾಗಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಸಮೀಪದ ಕಪ್ಪೆಕೆರೆಯವರು. ತಮ್ಮ ಹದಿನಾರನೇ ವಯಸ್ಸಿನಲ್ಲೇ ಯಕ್ಷಗಾನ ರಂಗಕ್ಕೆ ಪದಾರ್ಪಣೆ ಮಾಡಿದ ಅವರು ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತರಲ್ಲಿ ಒಬ್ಬರಾಗಿದ್ದಾರೆ. ಗುಂಡುಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ  ಸೇರಿದಂತೆ ಯಕ್ಷಗಾನ ಮೇಳಗಳಲ್ಲಿ ಐದು ದಶಕಗಳಿಗೂಕಾಲ ಸೇವೆಗೈದ ಹಿರಿಯ ಕಲಾವಿದರಾಗಿದ್ದಾರೆ. ಅತ್ಯಂತ ವಿಲಂಬಿತ ಶೈಲಿಯಲ್ಲಿಯ ಹಾಡುಗಾರಿಕೆ ಹಾಗೂ ವಿಶೇಷವಾಗಿ ರಂಗ ತಂತ್ರದ ನಿಪುಣತೆಗೆ ಹೆಸರಾದ ಭಾಗವತರಾಗಿದ್ದಾರೆ.
 ಮಾಂಬಾಡಿ ಸುಬ್ರಹ್ಮಣ್ಯ ಭಟ್
 ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ಮೇಳದ ತಿರುಗಾಟದ ಜೊತೆಗೆ ಯಕ್ಷಗಾನ ಗುರುಗಳಾಗಿ ಗುರುಪರಂಪರೆಯನ್ನು ಮುಂದುವರಿಸಿದ ಕಲಾವಿದರಾಗಿದ್ದಾರೆ.  ಯಕ್ಷಗಾನ ರಂಗದ ಹಿರಿಯ ಸಾಧಕರಾದ ತಂದೆ ಮಾಂಬಾಡಿ ನಾರಾಯಣ ಭಾಗವತರ  ಮಾರ್ಗದರ್ಶನದಲ್ಲಿ ಮುಂದುವರಿದು ಕಟೀಲು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯಂದಿರಿಗೆ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ.
ಜಬ್ಬಾರ್ ಸಮೊ
ಯಕ್ಷಗಾನ ರಂಗದ ಹಿರಿಯ ತಾಳಮದ್ದಳೆಯ ಅರ್ಥಧಾರಿಯಾಗಿರುವ ಜಬ್ಬಾರ್ ಸಮೊ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯವರು. ಮೊಯ್ದಿನ್ ಕುಂಞಿ ಹಾಗೂ ಬಿಪಾತುಮ್ಮ ದಂಪತಿಯ ಪುತ್ರರಾದ ಅವರು. ಎಳವೆಯಲ್ಲಿಯೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದವರು.  ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್‌ ಅವರು ಇವರ ಆರಂಭಿಕ ಗುರು. 1990ರ ಬಳಿಕ ತಾಳಮದ್ದಳೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಲು ಆರಂಭಿಸಿದ ಅವರು ವಾಲಿ, ಮಾಗಧ, ಕರ್ಣ, ಅರ್ಜುನ, ಶಲ್ಯ, ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ ಮೊದಲಾದ ಪಾತ್ರಗಳ ಅರ್ಥಗಾರಿಕೆಯಲ್ಲಿ  ವಿಶಿಷ್ಟ ಛಾಪನ್ನು ಮೂಡಿಸಿದವರು.
ಕೃಷ್ಣ ಪ್ರಕಾಶ ಉಳಿತ್ತಾಯ
’ಬಲಿಪ ಮಾರ್ಗ’ ಹಾಗೂ ’ಅಗರಿ ಮಾರ್ಗ’ ಕೃತಿಗಳ ಲೇಖಕರಾಗಿರುವ ಕೃಷ್ಣ ಪ್ರಕಾಶ ಉಳಿತ್ತಾಯರು ಹಿಮ್ಮೇಳ ಕಲಾವಿದರಾಗಿದ್ದಾರೆ. ಬಲಿಪ ಮಾರ್ಗ ಕೃತಿಯು ಯಕ್ಷ ರಂಗದ ಹಿರಿಯ ಕಲಾವಿದರಾದ ಹಿರಿಯ ಅಜ್ಜ ಬಲಿಪ ನಾರಾಯಣ ಭಾಗವತರು ಹಾಗೂ ಕಿರಿಯ ಬಲಿಪ ನಾರಾಯಣ ಭಾಗವತರ ಬದುಕು, ಹಾಡುಗಾರಿಕೆ ಮಾರ್ಗ ಇವೇ ಮೊದಲಾವುಗಳನ್ನು ಸುಂದರವಾಗಿ ನಿರೂಪಿಸುವ ಕೃತಿಯಾಗಿದೆ.
ಅಗರಿ ಮಾರ್ಗ ಕೃತಿಯು ಅಗರಿ ಮಾರ್ಗ ಕೃತಿಯು ತೆಂಕುತಿಟ್ಟಿನ ಯಕ್ಷಗಾನ ಪ್ರದರ್ಶನ ಕಲೆಯಲ್ಲಿ ಯಕ್ಷಬ್ರಹ್ಮ ಎಂದು ಪ್ರಸಿದ್ದರಾದ
ಅಗರಿ ಶ್ರೀನಿವಾಸ ಭಾಗವತರ ಬದುಕು, ಹಾಡುವ ಕ್ರಮ, ರಚನೆ, ಸಾಹಿತ್ಯ ವೈಶಿಷ್ಟ್ಯವನ್ನು ತೆರೆದಿಡುವ ಮಹತ್ವದ ಕೃತಿಯಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement