ತೆಹ್ರಾನ್/ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಬುಧವಾರ ಮುಂಜಾನೆ ಇಸ್ರೇಲ್ ವಾಯುಪಡೆ (IAF) ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ ವಿವಿಧ ಭಾಗಗಳಲ್ಲಿ ಬೃಹತ್ ಪ್ರಮಾಣದ ವೈಮಾನಿಕ ದಾಳಿ ನಡೆಸಿದೆ. ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿಕೊಂಡು ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಇರಾನ್ನ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ರಹಸ್ಯ ಅಣುಶಕ್ತಿ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ.
100ಕ್ಕೂ ಹೆಚ್ಚು ಯುದ್ಧ ವಿಮಾನಗಳು, 250ಕ್ಕೂ ಅಧಿಕ ಬಾಂಬ್ಗಳು!
ಇರಾನಿನ ಪೂರ್ವ ತೆಹ್ರಾನ್ನಲ್ಲಿರುವ ಇರಾನ್ನ ಬೃಹತ್ ಮಿಲಿಟರಿ ಸಂಕೀರ್ಣದ ಮೇಲೆ ಇಸ್ರೇಲ್ ಸತತವಾಗಿ ದಾಳಿ ಮಾಡಿದೆ. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಫೈಟರ್ ಜೆಟ್ಗಳು ಭಾಗವಹಿಸಿದ್ದು, ಸುಮಾರು 250ಕ್ಕೂ ಅಧಿಕ ಬಾಂಬ್ಗಳನ್ನು ಈ ಸಂಕೀರ್ಣದ ಮೇಲೆ ಹಾಕಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ. ಇಸ್ರೇಲ್ ವಿರುದ್ಧ ಭಯೋತ್ಪಾದನಾ ಯೋಜನೆಗಳನ್ನು ರೂಪಿಸುತ್ತಿದ್ದ ಮತ್ತು ಇರಾನ್ ನಾಗರಿಕರನ್ನು ಹತ್ತಿಕ್ಕುತ್ತಿದ್ದ ಪ್ರಮುಖ ಕಮಾಂಡ್ ಸೆಂಟರ್ಗಳನ್ನು ಈ ವೇಳೆ ಧ್ವಂಸಗೊಳಿಸಲಾಗಿದೆ ಎಂದು ಅದು ಹೇಳಿದೆ.
ಯಾವೆಲ್ಲಾ ನೆಲೆಗಳ ಮೇಲೆ ದಾಳಿ?
ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿಕೊಂಡು ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಇಸ್ರೇಲ್ ಗುರಿಯಾಗಿಸಿಕೊಂಡ ಪ್ರಮುಖ ಕೇಂದ್ರಗಳು:
ಐಆರ್ಜಿಸಿ (IRGC) ಮತ್ತು ಕುದ್ಸ್ ಫೋರ್ಸ್: ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಅದರ ವಿಶೇಷ ಘಟಕವಾದ ಕುದ್ಸ್ ಫೋರ್ಸ್ನ ಪ್ರಧಾನ ಕಚೇರಿಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಬಸಿಜ್ ಅರೆಸೇನಾ ಪಡೆ: ಆಂತರಿಕ ಭದ್ರತೆ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವ ಘಟಕಗಳ ಮೇಲೆ ದಾಳಿ ನಡೆಸಿದೆ.
ಸೈಬರ್ ಮತ್ತು ಇಂಟೆಲಿಜೆನ್ಸ್: ಇರಾನ್ನ ಗುಪ್ತಚರ ನಿರ್ದೇಶನಾಲಯ ಮತ್ತು ಸೈಬರ್ ಯುನಿಟ್ ಕೇಂದ್ರಗಳು.
ಲಾಜಿಸ್ಟಿಕ್ಸ್ ಸೆಂಟರ್: ಮಿಲಿಟರಿ ಪೂರೈಕೆ ಮತ್ತು ಶಸ್ತ್ರಾಸ್ತ್ರ ಸರಬರಾಜು ಕೇಂದ್ರಗಳು.
ರಹಸ್ಯ ಅಣುಶಕ್ತಿ ಕೇಂದ್ರ ಹಾಗೂ ಮಿಸೈಲ್ ಲಾಂಚರ್ಗಳು ನಾಶ
ಇಸ್ರೇಲ್ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ನೀಡಿರುವ ಮಾಹಿತಿಯಂತೆ, ತೆಹ್ರಾನ್ನ ಈಶಾನ್ಯ ಹೊರವಲಯದಲ್ಲಿರುವ ‘ಮಿನ್ ಜಾದೈ’ (Min Zadai) ಎಂಬ ರಹಸ್ಯ ಅಣುಬಾಂಬ್ ಅಭಿವೃದ್ಧಿ ಕೇಂದ್ರವನ್ನು ಇಸ್ರೇಲ್ ಸಂಪೂರ್ಣವಾಗಿ ನಾಶಪಡಿಸಿದೆ. ಇದರೊಂದಿಗೆ, ಇರಾನ್ನಾದ್ಯಂತ ಇದ್ದ ಸುಮಾರು 300ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚರ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಘದರ್-110 ಕ್ಷಿಪಣಿ ನೆಲೆಗಳ ಮೇಲೆ ದಾಳಿ
ಇಸ್ಫಹಾನ್ ಪ್ರಾಂತ್ಯದಲ್ಲಿರುವ ಅತ್ಯಾಧುನಿಕ ‘ಘದರ್-110’ (Ghadr-110) ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು ಅವುಗಳ ಉಡಾವಣಾ ವೇದಿಕೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ. 1,500 ರಿಂದ 2,000 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿಗಳು ಇಸ್ರೇಲ್ನ ಯಾವುದೇ ಭಾಗಕ್ಕೆ ತಲುಪುವ ಸಾಮರ್ಥ್ಯ ಹೊಂದಿದ್ದವು.
5,000 ಬಾಂಬ್ಗಳ ಮಳೆ
ಪ್ರಸಕ್ತ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಇದುವರೆಗೆ ಇರಾನ್ ಮೇಲೆ ಒಟ್ಟು 5,000 ಬಾಂಬ್ಗಳನ್ನು ಹಾಕಿದೆ. ಕೇವಲ ಕಳೆದ ನಾಲ್ಕು ದಿನಗಳಲ್ಲಿ 4,000 ಬಾಂಬ್ಗಳನ್ನು ಬಳಸಲಾಗಿದ್ದು, ಇದು 2025ರ ಜೂನ್ನಲ್ಲಿ ನಡೆದ 12 ದಿನಗಳ ಯುದ್ಧಕ್ಕೆ ಸಮಾನವಾಗಿದೆ. ಈ ಮೂಲಕ ತನ್ನ ಬಳಿ ಯುದ್ಧ ಸಾಮಗ್ರಿಗಳ ಕೊರತೆಯಿಲ್ಲ ಮತ್ತು ಇರಾನ್ನ ಪ್ರಮುಖ ಗುರಿಗಳನ್ನು ನಾಶಪಡಿಸುವುದನ್ನು ಮುಂದುವರಿಸುವುದಾಗಿ ಇಸ್ರೇಲ್ ಸಂದೇಶ ರವಾನಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ತನ್ನ ಕ್ಷಿಪಣಿ ಲಾಂಚರ್ಗಳನ್ನು ಮರುನಿರ್ಮಾಣ ಮಾಡುತ್ತಿದ್ದರೂ, ಇಸ್ರೇಲ್ನ ಸತತ ದಾಳಿಗಳು ಇರಾನ್ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ