ನವದೆಹಲಿ: ಇರಾನ್ ಸಂಘರ್ಷದ ನಡುವೆ ಭಾರತದ ತೈಲ ಸಂಸ್ಕರಣಾ ಘಟಕಗಳು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕದ ಹಣಕಾಸು ಇಲಾಖೆಯು 30 ದಿನಗಳ ಕಾಲ ‘ತಾತ್ಕಾಲಿಕ ವಿನಾಯಿತಿ’ (Waiver) ನೀಡುವುದಾಗಿ ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಅಧ್ಯಕ್ಷ ಟ್ರಂಪ್ ಅವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಶುಕ್ರವಾರ ತಿಳಿಸಿದ್ದಾರೆ.
“ಭಾರತವು ಅಮೆರಿಕದ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ನಿರಂತರವಾಗಿರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಬೆಸೆಂಟ್ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೊಲ ಮಾಡಲು ಪ್ರಯತ್ನಿಸುತ್ತಿದೆ. ಈ ತಾತ್ಕಾಲಿಕ ಕ್ರಮವು ಆ ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿನಾಯಿತಿಯು ಸಮುದ್ರದಲ್ಲಿ ಈಗಾಗಲೇ ನಿಂತಿರುವ (Stranded at sea) ತೈಲಕ್ಕೆ ಮಾತ್ರ ಅನ್ವಯಿಸುವುದರಿಂದ, ಇದರಿಂದ ರಷ್ಯಾ ಸರ್ಕಾರಕ್ಕೆ ದೊಡ್ಡ ಹಣಕಾಸಿನ ಲಾಭವೇನೂ ಆಗುವುದಿಲ್ಲ,” ಎಂದು ಬೆಸೆಂಟ್ ಸ್ಪಷ್ಟಪಡಿಸಿದ್ದಾರೆ.
ಭಾರತವು ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಮುಂಬರುವ ದಿನಗಳಲ್ಲಿ ಅಮೆರಿಕದಿಂದ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಖರೀದಿಸಲಿದೆ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಇರುವುದರಿಂದ ಭಾರತದ ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿತ್ತು. ಪ್ರಸ್ತುತ ಭಾರತದ ಬಳಿ ಕೇವಲ 25 ದಿನಗಳಿಗೆ ಆಗುವಷ್ಟು ಮಾತ್ರ ತೈಲ ಸಂಗ್ರಹವಿದೆ. ಅಲ್ಲದೆ, ಭಾರತವು ತನ್ನ ಒಟ್ಟು ಬಳಕೆಯ ಶೇ. 40 ರಷ್ಟು ತೈಲವನ್ನು ಮಧ್ಯಪ್ರಾಚ್ಯದಿಂದಲೇ ಆಮದು ಮಾಡಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರದಿಂದ ಭಾರತಕ್ಕೆ ಲಾಭವಾಗಲಿದೆ.
ತೈಲ ಕಂಪನಿಗಳಿಂದ ಮಾತುಕತೆ ಆರಂಭ:
ಭಾರತದ ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮತ್ತು ಮಂಗಳೂರಿನ ಎಂಆರ್ಪಿಎಲ್ (MRPL) ಕಂಪನಿಗಳು ರಷ್ಯಾದ ತೈಲ ಖರೀದಿಸಲು ಮಾತುಕತೆ ನಡೆಸಿವೆ. ವರದಿಗಳ ಪ್ರಕಾರ, ಈಗಾಗಲೇ ಸುಮಾರು 2 ಕೋಟಿ ಬ್ಯಾರೆಲ್ ರಷ್ಯಾ ತೈಲವನ್ನು ಖರೀದಿಸಲು ಭಾರತೀಯ ಕಂಪನಿಗಳು ಮುಂದಾಗಿವೆ.


ನಿಮ್ಮ ಕಾಮೆಂಟ್ ಬರೆಯಿರಿ