ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಮುಜ್ತಬಾ ಖಮೇನಿ ಅಧಿಕೃತವಾಗಿ ನೇಮಕ

ತೆಹ್ರಾನ್: ಇರಾನ್ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಇತ್ತೀಚೆಗೆ ನಿಧನರಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸ್ಥಾನಕ್ಕೆ ಪುತ್ರ ಮುಜ್ತಬಾ ಖಮೇನಿ ಅವರನ್ನು ನೂತನ ಉತ್ತರಾಧಿಕಾರಿಯನ್ನಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಸೋಮವಾರ ಮುಂಜಾನೆ ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನವು ಈ ವಿಷಯ ಪ್ರಕಟಿಸಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಅವರು ಮೃತಪಟ್ಟ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿದೆ. ಇದುವರೆಗೆ ಯಾವುದೇ ಸರ್ಕಾರಿ ಹುದ್ದೆ ಅಲಂಕರಿಸದ ೫೬ ವರ್ಷದ ಮುಜ್ತಬಾ, ಈಗ ಇರಾನ್‌ನ ಸರ್ವೋಚ್ಚ ಅಧಿಕಾರವನ್ನು ಕೈಗೆತ್ತಿಕೊಂಡಿದ್ದಾರೆ.
ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ (ಧರ್ಮಗುರುಗಳ ಮಂಡಳಿ) ಮುಜ್ತಬಾ ಅವರ ಪರವಾಗಿ ಭಾರಿ ಮತಗಳು ಚಲಾವಣೆಯಾಗಿವೆ ಎಂದು ತಿಳಿಸಿದೆ. ಅಲ್ಲದೆ, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಮುಜ್ತಬಾ ಖಮೇನಿ ನೇಮಕಾತಿಗೆ ಸಂಪೂರ್ಣ ಬೆಂಬಲ ಸೂಚಿಸಿವೆ.
ಈ ನೇಮಕಾತಿಯ ಮೂಲಕ ಇಸ್ಲಾಮಿಕ್ ಕ್ರಾಂತಿಯ ನಂತರ ಎರಡನೇ ಬಾರಿಗೆ ಅಧಿಕಾರ ಹಸ್ತಾಂತರ ನಡೆದಂತಾಗಿದೆ.
ಇನ್ನು ಮುಂದೆ ಇರಾನ್‌ನ ಮಿಲಿಟರಿ, ರೆವಲ್ಯೂಷನರಿ ಗಾರ್ಡ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಮೇಲಿನ ಸಂಪೂರ್ಣ ನಿಯಂತ್ರಣ ಮುಜ್ತಬಾ ಅವರ ಕೈಲಿರಲಿದೆ.

ಪ್ರಮುಖ ಸುದ್ದಿ :-   ಅಮೆರಿಕ-ಇರಾನ್ ಶಾಂತಿ ಒಪ್ಪಂದ ಈಗ ಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್

ಅಮೆರಿಕದ ತೀವ್ರ ಆಕ್ಷೇಪ
ಈ ನೇಮಕಾತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ. “ಖಮೇನಿ ಪುತ್ರನ ಆಯ್ಕೆ ನಮಗೆ ಒಪ್ಪಿತವಲ್ಲ. ಇರಾನ್‌ನಲ್ಲಿ ಶಾಂತಿ ಸ್ಥಾಪಿಸುವ ನಾಯಕ ನಮಗೆ ಬೇಕು,” ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಅನುಮೋದನೆ ಇಲ್ಲದ ನಾಯಕ ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೆಚ್ಚಿದ ಪ್ರಾದೇಶಿಕ ಉದ್ವಿಗ್ನತೆ ಮತ್ತು ತೈಲ ಬೆಲೆ ಏರಿಕೆ
ಬೆಲೆ ಏರಿಕೆ: ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮೂರೂವರೆ ವರ್ಷಗಳ ನಂತರ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ ೧೦೦ ಡಾಲರ್ ಗಡಿ ದಾಟಿದೆ.
ಬಹ್ರೇನ್‌ನ ಕುಡಿಯುವ ನೀರಿನ ಪ್ಲಾಂಟ್ ಮೇಲೆ ಇರಾನ್ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ, ಅರಬ್ ಲೀಗ್ ಮುಖ್ಯಸ್ಥರು ಇರಾನ್‌ನ “ಬೇಜವಾಬ್ದಾರಿ ನೀತಿ”ಯನ್ನು ಖಂಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement