ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು

ನವದೆಹಲಿ: ಲೋಕಸಭೆಯ ಸಭಾಧ್ಯಕ್ಷ (ಸ್ಪೀಕರ್) ಓಂ ಬಿರ್ಲಾ ಅವರ ಪದಚ್ಯುತಿಗೆ ಕೋರಿ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ ಸದನದಲ್ಲಿ ಸೋಲನುಭವಿಸಿದೆ. ಪ್ರತಿಪಕ್ಷಗಳ ಭಾರಿ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಧ್ವನಿ ಮತದ ಮೂಲಕ ಈ ನಿರ್ಣಯವನ್ನು ತಿರಸ್ಕರಿಸಲಾಯಿತು.
ಮತದಾನದ ನಂತರ ಸದನದ ಕಲಾಪವನ್ನು ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು. ಗುರುವಾರ (ಮಾರ್ಚ್‌ 12) ಓಂ ಬಿರ್ಲಾ ಅವರು ಮತ್ತೆ ಸಭಾಧ್ಯಕ್ಷರ ಪೀಠ ಅಲಂಕರಿಸಲಿದ್ದಾರೆ.
ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ  ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ವಿರುದ್ಧ ಇಂತಹ ನಿರ್ಣಯ ತಂದಿರುವುದು ಸಂಸದೀಯ ರಾಜಕಾರಣದ ಅತ್ಯಂತ ವಿಷಾದನೀಯ ಸಂಗತಿ ಎಂದು ಬಣ್ಣಿಸಿದರು.
“ಸ್ಪೀಕರ್ ಸದನದ ತಟಸ್ಥ ರಕ್ಷಕರಾಗಿದ್ದು, ಆಡಳಿತ ಮತ್ತು ಪ್ರತಿಪಕ್ಷ ಎರಡನ್ನೂ ಸಮಾನವಾಗಿ ಪ್ರತಿನಿಧಿಸುತ್ತಾರೆ. ಇಂತಹ ನಿರ್ಣಯ ತಂದಿರುವುದು ದುರದೃಷ್ಟಕರ,” ಎಂದು ಶಾ ಹೇಳಿದರು.
ಬಿಜೆಪಿ ದಶಕಗಳ ಕಾಲ ಪ್ರತಿಪಕ್ಷದಲ್ಲಿ ಕುಳಿತಿದ್ದರೂ ಎಂದಿಗೂ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿಲ್ಲ ಎಂದು ಅವರು ನೆನಪಿಸಿದರು. ಭಾರತದ ಇತಿಹಾಸದಲ್ಲಿ ಇಂತಹ ನಿರ್ಣಯಗಳು ಅತ್ಯಂತ ಅಪರೂಪವಾಗಿದ್ದು, ಸುಮಾರು 40 ವರ್ಷಗಳ ನಂತರ ಇಂತಹ ಪ್ರಯತ್ನ ನಡೆದಿದೆ ಎಂದರು. “ಸದನ ನಡೆಯುವುದು ನಿಯಮಗಳ ಪ್ರಕಾರವೇ ಹೊರತು ಪಕ್ಷಗಳ ಆಸೆಯಂತಲ್ಲ. ಪ್ರಜಾಪ್ರಭುತ್ವದ ಘನತೆಯ ಸಂಕೇತವಾಗಿರುವ ಸ್ಪೀಕರ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಸಾಂಸ್ಥಿಕ ನಂಬಿಕೆಗೆ ಧಕ್ಕೆ ತಂದಂತೆ ಎಂದು ಅಮಿತ್ ಶಾ ಹೇಳಿದರು.
 “ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ”
ಸದನದಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕರು ಸ್ಪೀಕರ್ ವಿರುದ್ಧ ಹರಿಹಾಯ್ದರು.
ಆರ್.ಜೆ.ಡಿ ಸಂಸದ ಅಭಯಕುಮಾರ ಸಿನ್ಹಾ: “ಸಭಾಧ್ಯಕ್ಷರ ಪೀಠವು ಈಗ ಆಡಳಿತ ಪಕ್ಷದ ದಬ್ಬಾಳಿಕೆಯ ಸಂಕೇತವಾಗಿದೆ. ಪ್ರತಿಪಕ್ಷಗಳು ಮಾತನಾಡಲು ನಿಂತರೆ ‘ನೋ, ನೋ’ ಎಂಬ ಉತ್ತರ ಮಾತ್ರ ಸಿಗುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆ.ಎಂ.ಎಂ ಸಂಸದ ವಿಜಯಕುಮಾರ ಹಂಸದಕ್: “ಪ್ರತಿಪಕ್ಷದ ಸಂಸದರು ಮಾತನಾಡುವಾಗ ಕ್ಯಾಮೆರಾಗಳನ್ನು ಬೇರೆಡೆ ತಿರುಗಿಸಲಾಗುತ್ತದೆ,” ಎಂದು ಹೊಸ ಆರೋಪ ಮಾಡಿದರು.
ಎನ್.ಸಿ.ಪಿ ಸಂಸದ ಬಜರಂಗ ಮನೋಹರ ಸೋನ್ವಾನೆ ಅವರು,  ಸ್ಪೀಕರ್ ಕಾರ್ಯವೈಖರಿಯನ್ನು ಟೇಬಲ್ ಫ್ಯಾನ್‌ಗೆ ಹೋಲಿಸಿದರು. “ಟೇಬಲ್ ಫ್ಯಾನ್ ಒಂದು ಕಡೆ ಮಾತ್ರ ಗಾಳಿ ನೀಡುವಂತೆ, ಬಿರ್ಲಾ ಅವರು ಬಲಗಡೆ (ಆಡಳಿತ ಪಕ್ಷ) ನೋಡಿದಾಗ ನಗು ಬೀರುತ್ತಾರೆ, ಎಡಗಡೆ (ಪ್ರತಿಪಕ್ಷ) ನೋಡಿದಾಗ ‘ನೋ, ನೋ’ ಎನ್ನುತ್ತಾರೆ,” ಎಂದು ಟೀಕಿಸಿದರು. ಓಂ ಬಿರ್ಲಾ ಅವರ ಮೇಲೆ ಯಾರೂ ವೈಯಕ್ತಿಕ ದಾಳಿ ಮಾಡುತ್ತಿಲ್ಲ. ಮತದಾನದಲ್ಲಿ ಏನಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನಮ್ಮಲ್ಲಿರುವ ಪ್ರಜಾಪ್ರಭುತ್ವ ಹಕ್ಕುಗಳನ್ನು ಎತ್ತಿ ತೋರಿಸಲು ನಾವು ಈ ಅವಿಶ್ವಾಸ ನಿರ್ಣಯವನ್ನು ತಂದಿದ್ದೇವೆ” ಎಂದು ಅವರು ಹೇಳಿದರು.
ಭಾರತದ ಸಂಸದೀಯ ಇತಿಹಾಸದಲ್ಲಿ ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ ಮಂಡನೆಯಾಗಿರುವುದು ಇದು ಕೇವಲ ಮೂರನೇ ಬಾರಿ. ಭಾರಿ ಚರ್ಚೆ ಮತ್ತು ಗದ್ದಲದ ನಂತರ ನಿರ್ಣಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೈತಿಕ ಜಯ ಸಿಕ್ಕಂತಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement