ಹೊನ್ನಾವರ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ದ ಬೃಹತ್ ಪ್ರತಿಭಟನಾ ಸಮಾವೇಶ

ಹೊನ್ನಾವರ  :  ನದಿ ತಾನು ಹರಿಯುವ ದಿಕ್ಕಿನ ವಿರುದ್ಧ ಹರಿದರೆ ಅದು ನಾಶಕ್ಕೆ ಮುನ್ನುಡಿ. ನದಿಯ ನೀರನ್ನು ಸುರಂಗ‌ ಕೊರೆದು ಹಿಂದಕ್ಕೆ ಒಯ್ಯುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ. ಯೋಜನೆ ನಿಲ್ಲಿಸಲು ಎಲ್ಲರೂ ಒಂದಾಗಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಲ್ಲಿ ಹೋರಾಟ ಮಾಡೋಣ ಎಂದು ನುಡಿದರು. ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ  ಸ್ವಾಮೀಜಿ ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಶರಾವತಿ ಉಳಿಸಿ ಹೋರಾಟ ಸಮಿತಿ ಮಂಗಳವಾರ ಆಯೋಜಿಸಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇವರು ಕೊಟ್ಟ ಪ್ರಕೃತಿ, ಪೂರ್ವಿಕರು ಕೊಟ್ಟ ಸಂಸ್ಕೃತಿ ಇವೆರಡನ್ನೂ ಉಳಿಸಿಕೊಳ್ಳಬೇಕು. ಶರಾವತಿ ನದಿಯ ನೀರನ್ನು ಕೃಷಿಗೆ, ಕುಡಿಯಲು ಬಳಸುವುದು ಸಂಸ್ಕೃತಿ.  ನದಿಯನ್ನು ಶೋಷಣೆ ಮಾಡುವುದು ವಿಕೃತಿ. ಇದು ತಾಯಿಯ ರಕ್ತ ಕುಡಿದಂತೆ. ನದಿ, ಪಶ್ಚಿಮ ಘಟ್ಟ ಇದನ್ನು ನಾವು ಸೃಷ್ಟಿಸಿದ್ದಲ್ಲ.ಹೀಗಾಗಿ ಇದನ್ನು ನಾವು ನಾಶ ಮಾಡಬಾರದು ಎಂದರು.
ಪ್ರಕೃತಿಗೆ ಹಾನಿ ಮಾಡುವ ಎಲ್ಲ ಯೋಜನೆಗಳೂ ಉತ್ತರ ಕನ್ನಡಕ್ಕೆ ಬರುತ್ತವೆ. ಜನರ ಅಭಿಪ್ರಾಯ ಕೇಳುವ ವ್ಯವಧಾನವಂತೂ ಯಾರಿಗೂ ಇಲ್ಲ. ಇಲ್ಲಿಯ ಪರಿಸರ, ಧಾರಣಶಕ್ತಿ ಎಷ್ಟು ಎಂಬುದಕ್ಕೆ ಮಾನದಂಡವಿಲ್ಲ. ಈ ಜಿಲ್ಲೆಯ ಜನರಿಗೆ ಬೇಡವಾಗಿದ್ದರೂ ಪರಿಸರಕ್ಕೆ ಮಾರಕವಾಗುವ ಇಂತಹ ಯೋಜನೆಗಳನ್ನು ಹೇರಲಾಗುತ್ತಿದೆ ಎಂದರು.
ಉತ್ತರ ಕನ್ನಡಕ್ಕೆ ಜನರ ಜೀವನಕ್ಕೆ ಏನುಬೇಕೋ ಆ ಯೊಜನೆಗಳು ಬರಲಿ. ಜಿಲ್ಲೆಯನ್ನು ಹಿಂಡಿ ರಸವನ್ನು ಬೇರೆಲ್ಲಿಗೋ ತೆಗೆದುಕೊಂಡುಹೋಗುವ ಯೋಜನೆ ಬೇಡ. ಪೃಕೃತಿಗೆ ಮತ್ತು ಸಂಸ್ಕೃತಿಗೆ ಹಾನಿ ಮಾಡುವ ಯಾವುದೇ ಯೋಜನೆಗೆ ರಾಮಚಂದ್ರಾಪುರ ಮಠದ ವಿರೋಧವಿದೆ ಎಂದು ಸ್ಪಷ್ಟವಾಗಿ ಹೇಳಿದರು. ಯೋಜನೆ ನಿಲ್ಲಿಸಲು ಎಲ್ಲರೂ ಒಂದಾಗಬೇಕು. ನಮ್ಮಲ್ಲಿ ಯಾವುದೇ ಕಾರಣಕ್ಕೂ ಒಡಕು ಮೂಡಬಾರದು. ಎಲ್ಲ ಸೇರಿ ಹೋರಾಡಬೇಕಿದೆ ಎಂದರು.
ನಾರಾಯಣಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ  ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಕಾನೂನು ಹೋರಾಟ ಹಾಗೂ ಹೋರಾಟದಲ್ಲಿ ಜನರ ಹೋರಾಟದಲ್ಲಿ ಜೊತೆಗೆ ಇರುತ್ತೇನೆ.  ಅವೈಜ್ಞಾನಿಕವಾದ ಈ ಯೋಜನೆ ನಿಲ್ಲಬೇಕು. ಎಲ್ಲ ಸಮಾಜದವರೂ ಬೆಂಬಲಕೊಡಬೇಕು ಎಂದು ಹೇಳಿದರು.
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಘಟನೆಯನ್ನು ಪ್ರಸ್ತಾಪಿಸಿದ ಶ್ರೀಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳು ನಡೆಯುತ್ತಿವೆ. ಅವೈಜ್ಞಾನಿಕ ಯೋಜನೆಗಳು ಬರುತ್ತಿವೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರಣ ಎಂದರು.
ಸಚಿವ ಮಂಕಾಳ ವೈದ್ಯರು ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಸರ್ಕಾರ ಯೋಜನೆಗೆ ಮುಂದಾದರೆ ಅವರು ತಾನು ಸಚಿವ ಸ್ಥಾನದಲ್ಲಿ ಇರುವುದಿಲ್ಲ ಎಂದು ವೇದಿಕೆಯಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದ ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ 18ಸಾವಿರ ಟನ್ ಸ್ಫೋಟಕ ಬಳಸಿ ಭೂಗತವಾಗಿ 500 ಮೀಟರ್ ಕೆಳಗೆ ಗೇರುಸೊಪ್ಪಾ ಡ್ಯಾಂನಿಂದ ತಲಕಳಲೆ ವರೆಗೆ 130 ಅಡಿ ಸುತ್ತಳತೆಯ ಸುರಂಗ ಕೊರೆಯುವ ಈ ಯೋಜನೆ ಮಾಡುತ್ತಾರೆ. ಹೀಗೆ ಮಾಡುವುದಾದರೆ ಅವರು ನನ್ನ ಎದೆಯ ಮೇಲೆಯೇ  ಮಾಡಿಕೊಂಡು ಹೋಗಲಿ ಎಂದರು. ಅಲ್ಲದೆ,  ಸಚಿವ ಮಂಕಾಳ ವೈದ್ಯ ಅವರು ಸರ್ಕಾರದ ಮಟ್ಟದಲ್ಲಿ ಈ ಯೋಜನೆ ಸ್ಥಗಿತಗೊಳಿಸಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ಶರಾವತಿ ನದಿಯಿಂದ ಈ ಯೋಜನೆ ಜಾರಿಯಾದಲ್ಲಿ ಭಟ್ಕಳ, ಹೊನ್ನಾವರ, ಕುಮಟಾ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಮೀನುಗಾರರು, ಕೃಷಿಕರಿಗೂ ತೊಂದರೆಯಾಗಲಿದೆ. ಯೋಜನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಮುಖ್ಯಮಂತ್ರಿ ಅವರಿಗೆ, ಇಂಧನ ಮಂತ್ರಿಗೂ ಸಮಸ್ಯೆ ಬಗ್ಗೆ ಅರಿವು ಮೂಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಈ ಯೋಜನೆ ವಿಧಾನ ಸಭೆಯಲ್ಲೇ ಘೋಷಣೆ ಆಗಿದೆ. ಜಿಲ್ಲೆಯ ಆರು ಜನ ಶಾಸಕರು ಇದ್ದರು. ೧೫ ದಿನ ಮಾತಾಡಲು ಅವಕಾಶವಿತ್ತು. ಆರು ಜನರಲ್ಲಿ ಯಾವ ಶಾಸಕರು ಮಾತಾಡಿಲ್ಲ. ಈ ಯೋಜನೆಗೆ ತಡೆ ನೀಡಿರುವ  ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇನೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಶರಾವತಿ ಪಂಪ್ಡ್ ಸ್ಠೋರೇಜ್ ಯೋಜನೆ ಜಾರಿಯಾದರೆ ನದಿ ಪಾತ್ರದ ಜನರಿಗೆ ಉಪ್ಪು ನೀರು ಕುಡಿಯುವ ಪರಿಸ್ಥಿತಿ ಬರಲಿದೆ. ವಿಧಾನಸಭೆಯಲ್ಲಿ,, ಬೆಳಗಾವಿ ಅಧಿವೇಶನದಲ್ಲಿ  ಈ ಯೋಜನೆಯ ಬೇಡ ಎಂದು ಗಟ್ಟಿಯಾಗಿ ಮಾತನಾಡಿದ್ದೇನೆ. ಜನ ಜಾಗೃತರಾಗಿ ಒಗ್ಗಟ್ಟಿನಿಂದ ಹೋರಾಡಬೇಕು. ಈ ಹೋರಾಟದಲ್ಲಿ ಜನರ ಜೊತೆ  ನಾನು ನಿಲ್ಲುತ್ತೇನೆ ಎಂದರು
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ ಕೇಂದ್ರ ಸರ್ಕಾರವೇ ಆಗಲಿ, ರಾಜ್ಯ ಸರ್ಕಾರವೇ ಆಗಲಿ ಈ ಯೋಜನೆಯನ್ನು ನಿಲ್ಲಿಸಬೇಕು ಒತ್ತಾಯಿಸಿದರು. ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಯೋಜನೆ ರದ್ದಾಗುವವರೆಗೆ ಹೋರಾಟ ಮುಂದುವರಿಯಬೇಕು ಎಂದರು.
ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಸೋನಿ, ಮಾಜಿ ಶಾಸಕ ಸುನೀಲ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ಮುಖಂಡ ಜಿ.ಎನ್.ಗೌಡ, ಟಿ.ಟಿ.ನಾಯ್ಕ. ಮಾಸ್ತಪ್ಪ ನಾಯ್ಕ, ಮಂಗಲದಾಸ ನಾಯ್ಕ ಶರಾವತಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮೊದಲಾದವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಂಕಿ ಮಂಡಳದ ಅಧ್ಯಕ್ಷ ಮಂಜುನಾಥ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ನಾಯ್ಕ, ಹೊನ್ನಾವರ ಬಿಜೆಪಿ ಮಂಡಳದ ಅಧ್ಯಕ್ಷ ಯೋಗೇಶ ಮೇಸ್ತ  ಬಿಜೆಪಿ ಮುಖಂಡ ಈಶ್ವರ ನಾಯ್ಕ ಮುರುಡೇಶ್ವರ, ಗೋವಿಂದ ನಾಯ್ಕ ಭಟ್ಕಳ, ನ್ಯಾಯವಾದಿ ವಿಕ್ರಮ ನಾಯ್ಕ ಮೊದಲಾದವರಿದ್ದರು.
ಹೋರಾಟ ಸಮಿತಿಯ ಅಧ್ಯಕ್ಷ  ವೆಂಕಟರಮಣ ಸ್ವಾಗತಿಸಿದರು, ಕೇಶವ ನಾಯ್ಕ ಬಳಕೂರು ವಂದಿಸಿದರು  ಸಂಗೀತಾ ನಾಯ್ಕ ಪ್ರಾರ್ಥಿಸಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement