ಮಾಲ್ಡೀವ್ಸ್‌ನಲ್ಲಿ ಸ್ಪೀಡ್‌ ಬೋಟ್ ಮಗುಚಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾಗೆ ಗಾಯ

ನವದೆಹಲಿ:ಮಾಲ್ಡೀವ್ಸ್‌ನಲ್ಲಿ ಶುಕ್ರವಾರ ನಡೆದ ವೇಗದ ದೋಣಿ (Speedboat) ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರು ಮುಂಬೈಗೆ ಮರಳಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. “ದುರದೃಷ್ಟವಶಾತ್ ನಡೆದ ಅಪಘಾತದಲ್ಲಿ ಗೌತಮ್ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ನಿಮ್ಮ ಹಾರೈಕೆಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ ಮತ್ತು ಅಪಘಾತಕ್ಕೀಡಾದ ಇತರ ಸ್ನೇಹಿತರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ,” ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ 1:15ಕ್ಕೆ (ಸ್ಥಳೀಯ ಕಾಲಮಾನ) ವಾವು ಅಟಾಲ್‌ನಲ್ಲಿರುವ ‘ವಿ ಫೆಲಿಧೂ’ ದ್ವೀಪದ ಬಳಿ ಈ ಅಪಘಾತ ಸಂಭವಿಸಿದೆ. ದೋಣಿಯಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು ಏಳು ಪ್ರವಾಸಿಗರಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಪ್ರಸಿದ್ಧ ರ್ಯಾಲಿ ಚಾಲಕ ಹರಿ ಸಿಂಗ್ ಸೇರಿದಂತೆ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಾಪತ್ತೆಯಾದವರಿಗಾಗಿ ಸಮುದ್ರ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯ ಪೊಲೀಸ್ ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ವಿಸ್ತರಿಸಿದ್ದು, ಅವರನ್ನು ಸುರಕ್ಷಿತವಾಗಿ ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement