ಹೊನ್ನಾವರ : ಮೇಯಲು ಬಿಟ್ಟಿದ್ದ ಹಸುವನ್ನು ಹತ್ಯೆ ಮಾಡಿ ಅದರ ಮಾಂಸವನ್ನು ಒಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವಂದೂರಿನ ಜಡ್ಡಿಗದ್ದೆ ಸಮೀಪದ ಕಿರ್ಸಾನಹಕ್ಕಲದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇದು ಸ್ಥಳೀಯರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಹತ್ಯೆ ಮಾಡಿದ ಗೋವಿನ ತಲೆಯ ಭಾಗ, ಚರ್ಮ, ಮೂಳೆಯ ಭಾಗಗಳನ್ನು ಬಿಸಾಡಿ ಹೋಗಿರುವುದು ಸೋಮವಾರ ಅರಣ್ಯ ಇಲಾಖೆಯ ಜಾಗದಲ್ಲಿ ಪತ್ತೆಯಾಗಿವೆ. ಈ ಹಸು ವಂದೂರು ಜಡ್ಡಿಕೇರಿಯ ಗಣಪತಿ ಮಾಬ್ಲೇಶ್ವರ ಭಟ್ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು, ಈ ಬಗ್ಗೆ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಘಟನೆ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಎಂದಿನಂತೆ ಮೇಯಲು ಬಿಟ್ಡ ಆಕಳು ಸಂಜೆಯವರೆಗೂ ಬರಲಿಲ್ಲವಾದ್ದರಿಂದ ಅದನ್ನು ಹುಡುಕಲಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುಷ್ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ತನಿಖೆಗೆ ತಕ್ಷಣ ಕಾರ್ಯೋನ್ಮುಖವಾಗಿದೆ. ಈ ಪ್ರದೇಶಕ್ಕೆ ಆಗಮಿಸಿದ ವಾಹನಗಳು, ಸಿ.ಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ