ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ವಿಮಾನ ; 66 ಮಂದಿ ಸಾವು

ಬೊಗೋಟಾ: ಕೊಲಂಬಿಯಾದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಕನಿಷ್ಠ 66 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. 125 ಸೈನಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕ್-ಆಫ್ ಆಗುವ ಸಂದರ್ಭದಲ್ಲೇ ಪತನಗೊಂಡಿದೆ.
ಕೊಲಂಬಿಯಾದ ದಕ್ಷಿಣ ಭಾಗದ ಎಕ್ವಡಾರ್ ಮತ್ತು ಪೆರು ಗಡಿ ಸಮೀಪವಿರುವ ಪೋರ್ಟೊ ಲೆಗುಯಿಜಾಮೊ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ C-130 ಹರ್ಕ್ಯುಲಸ್ ವಿಮಾನವು ಪತನಗೊಂಡು ಅಮೆಜಾನ್ ಕಾಡಿನೊಳಗೆ ಬಿದ್ದಿದೆ. ಅಪಘಾತದ ತೀವ್ರತೆಗೆ ವಿಮಾನವು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದ್ದು, ದಟ್ಟ ಕಾಡಿನಾದ್ಯಂತ ಅವಶೇಷಗಳು ಹರಡಿಕೊಂಡಿವೆ.

ಮೃತಪಟ್ಟವರಲ್ಲಿ 58 ಸೈನಿಕರು, 6 ವಾಯುಪಡೆ ಸಿಬ್ಬಂದಿ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಹತ್ತಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಕನಿಷ್ಠ 77 ಜನರನ್ನು ರಕ್ಷಿಸಲಾಗಿದೆ ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್, “ಇದು ದೇಶಕ್ಕೆ ಅತ್ಯಂತ ನೋವಿನ ಸಂಗತಿ. ಅಪಘಾತಕ್ಕೆ ನಿಖರ ಕಾರಣ ಏನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ” ಎಂದಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ಪುಟುಮಾಯೊದ ಮತ್ತೊಂದು ನಗರಕ್ಕೆ ಸೈನ್ಯವನ್ನು ಸಾಗಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಅಮೆರಿಕಾದಲ್ಲಿ ಸಂಭವಿಸುತ್ತಿರುವ ಎರಡನೇ C-130 ವಿಮಾನ ಅಪಘಾತ ಇದಾಗಿದ್ದು, ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಮಿಲಿಟರಿ ಉಪಕರಣಗಳನ್ನು ಆಧುನೀಕರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement