ಹಾಸನ : ಸಕಲೇಶಪುರ ತಾಲ್ಲೂಕಿನ ಪ್ರಸಿದ್ಧ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೇಳೆ ಸ್ಥಳೀಯರು ಮತ್ತು ಫೋಟೋಗ್ರಾಫರ್ಗಳ ನಡುವೆ ಜಗಳ ಉಂಟಾಗಿದ್ದು, ಅದು ಮಾರಾಮಾರಿಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಬೆಟ್ಟದ ಸಾಲಿನಲ್ಲಿರುವ ಈ ದೇವಸ್ಥಾನವು ಪ್ರಿ-ವೆಡ್ಡಿಂಗ್ ಫೋಟೋಶೂಟ್ಗಳಿಗೆ ಅತ್ಯಂತ ಜನಪ್ರಿಯ ತಾಣವಾಗಿದೆ. ವರದಿಯ ಪ್ರಕಾರ, ಚಿತ್ರೀಕರಣದ ಸಮಯದಲ್ಲಿ, ಕೆಲವರು ದೇವಾಲಯದ ಆವರಣದಲ್ಲಿ ಪ್ರಿ ವೆಡ್ಡಿಂಗ್ ಶೂಟಿಂಗ್ಗೆ ಆಕ್ಷೇಪಿಸಿದ್ದಾರೆ. ಅಲ್ಲದೆ ಛಾಯಾಗ್ರಾಹಕರು ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಧರಿಸಿದ್ದರು ಎಂದು ಆರೋಪಿಸಿದ್ದಾರ. ಇದು ಧಾರ್ಮಿಕ ನಿಯಮಗಳ ಉಲ್ಲಂಘನೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸ್ಥಳೀಯರು ಇಬ್ಬರು ಫೋಟೋಗ್ರಾಫರ್ಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಅವರ ಬಳಿಯಿದ್ದ ಬೆಲೆಬಾಳುವ ಹೈ-ಎಂಡ್ ಕ್ಯಾಮೆರಾ ಸೇರಿದಂತೆ ಇನ್ನಿತರ ಶೂಟಿಂಗ್ ಉಪಕರಣಗಳನ್ನು ಜಖಂಗೊಳಿಸಲಾಗಿದೆ. ಗಾಯಗೊಂಡ ಇಬ್ಬರೂ ಛಾಯಾಗ್ರಾಹಕರನ್ನು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಮೂಡಿಗೆರೆ ತಾಲ್ಲೂಕಿನ ನಿವಾಸಿಗಳಾದ ಏಳು ಜನರನ್ನು ಬಂಧಿಸಿದ್ದಾರೆ:
ಈ ಹಲ್ಲೆಯು ಪೂರ್ವಯೋಜಿತವೇ ಅಥವಾ ಕ್ಷಣಿಕ ಆವೇಶದಲ್ಲಿ ನಡೆದಿದ್ದೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಧಾರ್ಮಿಕ ಕೇಂದ್ರವಾಗಿರುವ ಇಂತಹ ಸ್ಥಳಗಳಲ್ಲಿ ಫೋಟೋಗ್ರಾಫಿ ಕುರಿತು ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಇದು ಕೆಲವೊಮ್ಮೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ