ಸಿದ್ದಾಪುರ : ನಕಲಿ ಬಂಗಾರದ ನಾಣ್ಯ ನೀಡಿ 10 ಲಕ್ಷ ರೂ. ವಂಚನೆ ; ಅಂತರ ಜಿಲ್ಲಾ ವಂಚಕನನ್ನು ಬಂಧಿಸಿದ ಪೊಲೀಸರು

ಸಿದ್ದಾಪುರ: ಕಡಿಮೆ ಬೆಲೆಗೆ ಅಸಲಿ ಬಂಗಾರ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ  ಹಣ ಲೂಟಿ ಮಾಡುತ್ತಿದ್ದ ಅಂತರ ಜಿಲ್ಲಾ ವಂಚಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ವ್ಯಕ್ತಿಯೊಬ್ಬರಿಗೆ ಈ ಆರೋಪಿಯು ಇದೇ ರೀತಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಗಾರದ ನಾಣ್ಯವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿದ್ದ ಈತನ ಮಾತುಗಳನ್ನು ನಂಬಿದ ವ್ಯಕ್ತಿಯೊಬ್ಬರು ಬಂಗಾರ ಖರೀದಿಸಲು ಈತನಿಗೆ 10 ಲಕ್ಷ ರೂಪಾಯಿ ನೀಡಿದ್ದರು. ನಂತರ ಆರೋಪಿಯು  ನಕಲಿ ಬಂಗಾರವನ್ನು ನೀಡಿ ಸ್ಥಳದಿಂದ ಪರಾರಿಯಾಗಿದ್ದ. ತಾನು ವಂಚನೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದ ಕೂಡಲೇ ಸಂತ್ರಸ್ತ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸ್ ಇಲಾಖೆ, ಆರೋಪಿಯ ಪತ್ತೆಗಾಗಿ ತಕ್ಷಣವೇ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿತ್ತು. ತಾಂತ್ರಿಕ ಸಾಕ್ಷ್ಯಗಳು ಹಾಗೂ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಗಜೇಂದ್ರ ಹಾಲೇಶಪ್ಪ ಕೊರಚರ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಶಿವಮೊಗ್ಗ ಜಿಲ್ಲೆಯ  ಶಿಕಾರಿಪುರ ತಾಲೂಕಿನ ಮುದ್ದೇಶನಹಳ್ಳಿಯವನು ಎಂದು ಹೇಳಲಾಗಿದೆ. ಬಂಧಿತನಿಂದ,  ₹10 ಲಕ್ಷ ರೂಪಾಯಿ, ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಕ್ಷಿಪ್ರವಾಗಿ ಪ್ರಕರಣವನ್ನು ಭೇದಿಸಿ, ಸಾರ್ವಜನಿಕರ ಹಣವನ್ನು ಮರಳಿ ಪಡೆಯುವಲ್ಲಿ ಶ್ರಮಿಸಿದ ಸಿದ್ದಾಪುರ ಪೊಲೀಸರ ಚಾಕಚಕ್ಯತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.”ಸಾರ್ವಜನಿಕರು ಕಡಿಮೆ ಬೆಲೆಗೆ ಬಂಗಾರ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳನ್ನು ನೀಡುವ ಆಮಿಷಗಳನ್ನು ನಂಬಬಾರದು. ಇಂತಹ ಆಮಿಷ ಒಡ್ಡುವ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement