ದೇಶಾದ್ಯಂತ 1,100ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ : ಮೈಸೂರಿನಲ್ಲಿ ಆರೋಪಿಯ ಬಂಧನ

ನವದೆಹಲಿ: ದೇಶಾದ್ಯಂತ ಶಾಲೆಗಳು, ಆಸ್ಪತ್ರೆಗಳು, ಹೈಕೋರ್ಟ್‌ಗಳು ಮತ್ತು ಸರ್ಕಾರಿ ಕಚೇರಿಗಳಿಗೆ 1,100 ಕ್ಕೂ ಹೆಚ್ಚು ನಕಲಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಕರ್ನಾಟಕದ ಮೈಸೂರಿನಲ್ಲಿ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಶ್ರೀನಿವಾಸ ಲೂಯಿಸ್ (47) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಶ್ರೀನಿವಾಸ ಲೂಯಿಸ್ ಸ್ನಾತಕೋತ್ತರ ಪದವೀಧರನಾಗಿದ್ದು, ಮೂಲತಃ ಬೆಂಗಳೂರಿನವನು. ಪ್ರಸ್ತುತ ನಿರುದ್ಯೋಗಿಯಾಗಿರುವ ಈತ, ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ತನ್ನ ತಾಯಿಯೊಂದಿಗೆ ವಾಸವಾಗಿದ್ದಾನೆ.
ಈತ ಭಾರತದಾದ್ಯಂತ 1,100 ಕ್ಕೂ ಹೆಚ್ಚು ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿ ಹೈಕೋರ್ಟ್, ವಿಧಾನಸಭೆ ಹಾಗೂ ಹಲವಾರು ಶೈಕ್ಷಣಿಕ ಮತ್ತು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ಸರಣಿ ಬಾಂಬ್ ಬೆದರಿಕೆಗಳು ಬಂದಿದ್ದವು.

ದೆಹಲಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಮೈಸೂರಿನ ಬಾಡಿಗೆ ಮನೆಯಲ್ಲಿದ್ದ ಲೂಯಿಸ್‌ನನ್ನು ಬಂಧಿಸಲಾಯಿತು.
ಕಳೆದ ಕೆಲವು ತಿಂಗಳುಗಳಿಂದ ಈತ ನೂರಾರು ಕರೆಗಳು ಮತ್ತು ಇಮೇಲ್‌ಗಳ ಮೂಲಕ ಪ್ರಮುಖ ಸಂಸ್ಥೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ತನಿಖೆಯ ವೇಳೆ ಈ ಬೆದರಿಕೆಗಳ ಮೂಲ ಕರ್ನಾಟಕದ ಶ್ರೀನಿವಾಸ ಎಂಬುದು ಪತ್ತೆಯಾಗಿದೆ.
“ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ತೀವ್ರ ಮಾನಸಿಕ ಒತ್ತಡದಲ್ಲಿದ್ದಿರಬಹುದು ಎಂದು ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ, ದೇಶಾದ್ಯಂತ ಇಮೇಲ್ ಮತ್ತು ಇತರ ಪ್ಲಾಟ್‌ ಫಾರ್ಮ್‌ ಮೂಲಕ 1,100 ಕ್ಕೂ ಹೆಚ್ಚು ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ ಹಲವು ಎಫ್‌ಐಆರ್‌ಗಳು (FIR) ದಾಖಲಾಗಿವೆ. ಪೊಲೀಸರು ಆತನನ್ನು ದೆಹಲಿಗೆ ಕರೆತರುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ. ಈತ ಬೇರೆ ಎಲ್ಲೆಲ್ಲಿ ಇಂತಹ ಬೆದರಿಕೆಗಳನ್ನು ಹಾಕಿದ್ದಾನೆ ಎಂಬ ಬಗ್ಗೆ ತನಿಖೆ ಮುಂದುವರಿಯಲಿದೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement