ಬೆಂಗಳೂರು : ಟೆಕ್ಕಿ ಪತಿ ಆತ್ಮಹತ್ಯೆ, ಅದನ್ನು ನೋಡಿ 17ನೇ ಮಹಡಿಯಿಂದ ಜಿಗಿದು ಪತ್ನಿ ಸಾವು

ಬೆಂಗಳೂರು: ಸೋಮವಾರ (ಮಾರ್ಚ್ 30) ಹೃದಯವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. . ಈ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತಿಯ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ನಂತರ ಪತ್ನಿಯೂ ಸಹ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಭಾನುಚಂದರ ರೆಡ್ಡಿ ಕುಂಟಾ (32) ಮತ್ತು ಅವರ ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಎಂದು ಗುರುತಿಸಲಾಗಿದೆ. ಮೂಲತಃ ತೆಲಂಗಾಣದವರಾದ ಈ ದಂಪತಿ ಬೆಂಗಳೂರಿನ ಖಾಸಗಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು.

ಸೋಮವಾರ ಮನೆಯಲ್ಲಿದ್ದ ವೇಳೆ ಭಾನು ಚಂದರ ಅವರು ತಮ್ಮ ಕೊಠಡಿಯ ಬಾಗಿಲು ಹಾಕಿಕೊಂಡಿದ್ದರು. ಶಾಜಿಯಾ ಅವರು ಬಂದು ಎಷ್ಟೇ ಬಾರಿ ಬಾಗಿಲು ತಟ್ಟಿದರೂ ಪತಿ ಉತ್ತರಿಸಲಿಲ್ಲ. ಇದರಿಂದ ಆತಂಕಗೊಂಡ ಶಾಜಿಯಾ, ಅಕ್ಕಪಕ್ಕದವರು ಮತ್ತು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯ ನೆರವು ಕೋರಿದ್ದಾರೆ. ಅವರು ಬಾಗಿಲನ್ನು ಬಲವಂತವಾಗಿ ತೆರೆದಾಗ, ಭಾನು ಚಂದರ ಕೊಠಡಿಯ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಶಾಜಿಯಾ, ಅದೇ ಕ್ಷಣದಲ್ಲಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಬಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಈಕೆ ಪ್ರಮುಖ ಟೆಕ್ ಕಂಪನಿ ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತೆಲಂಗಾಣದ ಕುಟುಂಬದ ಸದಸ್ಯರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಅಸಹಜ ಸಾವಿನ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಕಾರಣವೇನು?
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಒಂಬತ್ತು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಈ ದಂಪತಿ ನಡುವೆ ಮದುವೆಯ ನಂತರ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅಲ್ಲದೆ, ಭಾನು ಚಂದರ್ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಭಾವ್ಯ ಆರೋಗ್ಯ ಸಮಸ್ಯೆಗಳು, ಪತಿ-ಪತ್ನಿಯ ನಡುವಿನ ದಾಂಪತ್ಯದಲ್ಲಿನ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡ ಸೇರಿದಂತೆ ಸಾವಿಗೆ ಕಾರಣವಾದ ಸಂದರ್ಭಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ಹಿಂದಿನ ನಿಖರ ಕಾರಣ ತಿಳಿಯಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement