ಬೆಂಗಳೂರಿನಲ್ಲಿ ಮನಕಲಕುವ ಘಟನೆ : ನೀರಿನ ಬಕೆಟ್‌ನಲ್ಲಿ ಬಿದ್ದು11 ತಿಂಗಳ ಮಗು ಸಾವು ; ಮನನೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಹೃದಯವಿದ್ರಕ ಘಟನೆಯೊಂದು ನಡೆದಿದೆ. 11 ತಿಂಗಳ ಹಸುಗೂಸು ಆಕಸ್ಮಿಕವಾಗಿ ನೀರಿನ ಬಕೆಟ್‌ನಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ, ಮಗುವಿನ ಸಾವಿಗೆ ತಾನೇ ಕಾರಣ ಎಂದು ನೊಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ಮೃತ ತಾಯಿ ಪ್ರತಿಭಾ (29) ಎಂದು ಹೇಳಲಾಗಿದೆ. ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಪ್ರತಿಭಾ ಹಾಗೂ ಆಕೆ ಗಂಡ ಮಹಂತೇಶ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಈ ದಂಪತಿಗೆ 11 ತಿಂಗಳ ಹಿಂದೆ ಗಂಡು ಮಗು ಜನಿಸಿದೆ. ಗಂಡ-ಹೆಂಡತಿ ಇಬ್ಬರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ ಬುಧವಾರ ಮಹಾಂತೇಶ ಕೆಲಸಕ್ಕೆ ಹೋಗಿದ್ದಾಗ, ಪ್ರತಿಭಾ ಮಗುವಿನ ಜೊತೆ ಮನೆಯಲ್ಲಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತಿಭಾ ಅವರು ಒಣಗಿದ ಬಟ್ಟೆಗಳನ್ನು ತರಲು ಮನೆಯ ಟೆರೇಸ್ ಮೇಲೆ ಹೋಗಿದ್ದರು. ಈ ಸಮಯದಲ್ಲಿ ಮನೆಯೊಳಗೆ ಅಂಬೆಗಾಲಿಡುತ್ತಿದ್ದ 11 ತಿಂಗಳ ಮಗು   ಬಟ್ಟೆ ಒಗೆಯುವ ಸ್ಥಳದಲ್ಲಿದ್ದ ನೀರಿನ ಬಕೆಟ್ ಬಳಿ ತೆರಳಿ ಆಕಸ್ಮಿಕವಾಗಿ ಅದರೊಳಗೆ ಬಿದ್ದಿದೆ. ಪ್ರತಿಭಾ ಟೆರೇಸ್‌ನಿಂದ ಕೆಳಗೆ ಬಂದಾಗ, ಮಗು ನೀರಿನ ಬಕೆಟ್‌ನಲ್ಲಿ ಪ್ರಾಣಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಮಗುವಿನ ಸಾವಿನ ಬೆನ್ನಲ್ಲೇ ತಾಯಿಯ ನಿರ್ಧಾರ
ಮಗುವಿನ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಮತ್ತು ಅತಿಯಾದ ಅಪರಾಧ ಪ್ರಜ್ಞೆಗೆ ಒಳಗಾದ ಪ್ರತಿಭಾ, ತಕ್ಷಣವೇ ತಾನೂ ಪ್ರಾಣತ್ಯಾಗ ಮಾಡಲು ನಿರ್ಧರಿಸಿದರು. ಮೊದಲು ಕೈ ಮಣಿಕಟ್ಟನ್ನು ಕೊಯ್ದುಕೊಂಡು, ನಂತರ ಮಾತ್ರೆಗಳನ್ನು ಸೇವಿಸಿದ್ದಾರೆ. ಅದರಲ್ಲೂ ಸಾವು ಬಾರದಿದ್ದಾಗ, ಅಂತಿಮವಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೆ ಸುಮಾರು 6:30ರ ಸುಮಾರಿಗೆ ಪತಿ ಮಹಂತೇಶ ಕೆಲಸ ಮುಗಿಸಿ ಮನೆಗೆ ಬಂದಾಗ, ಮನೆ ಒಳಗಿನಿಂದ ಲಾಕ್ ಆಗಿತ್ತು. ಬಳಿಕ ತಮ್ಮ ಬಳಿ ಇದ್ದ ಬೇರೆ ಕೀ (Spare Key) ಬಳಸಿ ಬಾಗಿಲು ತೆರೆದು ಒಳಗೆ ಹೋದಾಗ ಪತ್ನಿ ಮತ್ತು ಮಗು ಇಬ್ಬರೂ ಮೃತಪಟ್ಟಿರುವುದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

ಡೆತ್‌ನೋಟ್‌ನಲ್ಲಿ ಏನಿದೆ?
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಪ್ರತಿಭಾ ಬರೆದಿದ್ದ ಡೆತ್‌ನೋಟ್ ಮತ್ತು ಖಾಲಿಯಾದ 15 ಮಾತ್ರೆಗಳ ಸ್ಟ್ರಿಪ್ ಸಿಕ್ಕಿದೆ. “ನನ್ನ ಮಗುವಿನ ಸಾವಿಗೆ ನಾನೇ ನೇರ ಹೊಣೆ. ನಾನು ಸ್ವಲ್ಪ ಹೊತ್ತು ಟೆರೇಸ್‌ಗೆ ಹೋದಾಗ ಈ ಅವಘಡ ಸಂಭವಿಸಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪ್ರತಿಭಾ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಅಲ್ಲದೆ, ತಾವು ಮೊದಲು ಮಾತ್ರೆ ಸೇವಿಸಿ, ಕೈ ಕೊಯ್ದುಕೊಂಡು ಸಾಯಲು ಯತ್ನಿಸಿರುವುದಾಗಿಯೂ ಅದರಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ಕುಟುಂಬ ಈ ಬಾಡಿಗೆ ಮನೆಯಲ್ಲಿ ವಾಸವಿತ್ತು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement