ನನ್ನನ್ನು ಮೌನಗೊಳಿಸಬಹುದು..ಸೋಲಿಸಲಾಗದು : ರಾಘವ ಚಡ್ಡಾ ವೀಡಿಯೊ ಸಂದೇಶದಿಂದ ಎಎಪಿ ಆಂತರಿಕ ಕಲಹ ಸ್ಫೋಟ

ನವದೆಹಲಿ: ಆಮ್ ಆದ್ಮಿ ಪಕ್ಷವು (AAP) ರಾಜ್ಯಸಭೆಯ ಉಪ ನಾಯಕನ ಸ್ಥಾನದಿಂದ ರಾಘವ ಚಡ್ಡಾ ಅವರನ್ನು ದಿಢೀರ್ ಕೆಳಗಿಳಿಸಿದ ಬೆನ್ನಲ್ಲೇ, ಪಕ್ಷದ ಆಂತರಿಕ ಕಲಹ ಸ್ಫೋಟಗೊಂಡಿದೆ. ಈ ಬೆಳವಣಿಗೆಯ ಕುರಿತು ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಘವ ಚಡ್ಡಾ, “ನನ್ನನ್ನು ಮೌನಗೊಳಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ” ಎಂದು ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದಾರೆ.
ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ರಾಘವ ಚಡ್ಡಾ, ಸಂಸತ್ತಿನಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತುವುದನ್ನು ತಡೆಯಲು ಪಕ್ಷವು ಸಂಚು ರೂಪಿಸಿದೆ ಎಂದು ಎಎಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

“ಸಂಸತ್ತಿನಲ್ಲಿ ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಜನರ ಸಮಸ್ಯೆಗಳನ್ನು ಎತ್ತಿದ್ದೇನೆ. ಬಹುಶಃ ಸಂಸತ್ತಿನಲ್ಲಿ ಚರ್ಚೆಯಾಗದ ವಿಷಯಗಳ ಬಗ್ಗೆಯೂ ನಾನು ಮಾತನಾಡಿದ್ದೇನೆ. ಅದು ಪಕ್ಷಕ್ಕೆ ಹೇಗೆ ಹಾನಿ ಮಾಡುತ್ತದೆ? ಜನರ ಪರವಾಗಿ ಮಾತನಾಡುವುದು ಅಪರಾಧವೇ?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ರಾಜ್ಯಸಭೆಯಲ್ಲಿ ತಮಗೆ ನೀಡಲಾಗುವ ಸಮಯವನ್ನು ನಿರ್ಬಂಧಿಸುವಂತೆ ಎಎಪಿ ಪಕ್ಷವು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಸಾರ್ವಜನಿಕ ಬೆಂಬಲವು ತಮ್ಮ ಸಂಕಲ್ಪವನ್ನು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ.

ನಾಯಕತ್ವಕ್ಕೆ ನೇರ ಸವಾಲು:
, “ನನ್ನ ಮೌನವನ್ನು ಸೋಲು ಎಂದು ಭಾವಿಸಬೇಡಿ. ನಾನು ಪ್ರವಾಹವಾಗಿ ಬದಲಾಗಬಲ್ಲ ನದಿ” ಎಂದು ಕಿಡಿಕಾರಿದ್ದಾರೆ. ಇದನ್ನು ಪಕ್ಷದ ನಾಯಕತ್ವಕ್ಕೆ, ವಿಶೇಷವಾಗಿ ಅರವಿಂದ್ ಕೇಜ್ರಿವಾಲ್‌ಗೆ ನೀಡಿದ ಎಚ್ಚರಿಕೆ ಎಂದು ನೋಡಲಾಗುತ್ತಿದೆ.
ಅಶೋಕ ಮಿತ್ತಲ್ ನೂತನ ಉಪ ನಾಯಕ:
ಗುರುವಾರವಷ್ಟೇ ಎಎಪಿ ಪಕ್ಷವು ರಾಜ್ಯಸಭಾ ಸಚಿವಾಲಯಕ್ಕೆ ಅಧಿಕೃತ ಪತ್ರ ಬರೆದು, ರಾಘವ ಚಡ್ಡಾ ಅವರ ಬದಲಿಗೆ ಸಂಸದ ಅಶೋಕಕುಮಾರ ಮಿತ್ತಲ್ ಅವರನ್ನು ರಾಜ್ಯಸಭೆಯ ನೂತನ ಉಪ ನಾಯಕನನ್ನಾಗಿ ನೇಮಕ ಮಾಡಿದೆ. ಪಕ್ಷದ ಈ ಹಠಾತ್ ನಿರ್ಧಾರವು ಮುಂಬರುವ ಸಂಸತ್ ಅಧಿವೇಶನದ ಮುನ್ನವೇ ದೊಡ್ಡ ಸಂಚಲನ ಮೂಡಿಸಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಚಡ್ಡಾ ಇತ್ತೀಚೆಗೆ ಸದ್ದು ಮಾಡಿದ್ದು ಏಕೆ?
ಭಾರತದಲ್ಲಿ ಪಿತೃತ್ವ ರಜೆಯನ್ನು ( (Paternity Leave) ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕು ಎಂದು ರಾಘವ ಚಡ್ಡಾ ಸಂಸತ್ತಿನಲ್ಲಿ ಪ್ರಬಲವಾಗಿ ಪ್ರತಿಪಾದಿಸಿದ್ದರು. ಮಕ್ಕಳ ಪಾಲನೆಯು ಪೋಷಕರಿಬ್ಬರ ಸಮಾನ ಜವಾಬ್ದಾರಿಯಾಗಬೇಕು ಎಂಬ ಅವರ ಮಾತುಗಳು ಗಮನ ಸೆಳೆದಿದ್ದವು. ಕಾನೂನುಗಳು ಆಧುನಿಕ ಪೋಷಕರ ವಾಸ್ತವಗಳನ್ನು ಪ್ರತಿಬಿಂಬಿಸಬೇಕು ಎಂದು ಅವರು ಒತ್ತಿ ಹೇಳಿದ್ದರು.
ನಟಿ ಪರಿಣಿತಿ ಚೋಪ್ರಾ ಅವರ ಪತಿ ಕೂಡ ಆಗಿರುವ ಚಡ್ಡಾ, ಇತ್ತೀಚೆಗಷ್ಟೇ ತಂದೆಯಾದ ಸಂಭ್ರಮವನ್ನು ಹಂಚಿಕೊಂಡಿದ್ದರು.
ಪ್ರಸ್ತುತ ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷವು ಒಟ್ಟು 10 ಸದಸ್ಯರನ್ನು ಹೊಂದಿದ್ದು (ಪಂಜಾಬ್‌ನಿಂದ 7 ಮತ್ತು ದೆಹಲಿಯಿಂದ 3), ಈಗಿನ ಈ ಬೆಳವಣಿಗೆಗಳು ಪಕ್ಷದ ಆಂತರಿಕ ಭಿನ್ನಮತವನ್ನು ಬೀದಿಗೆ ತಂದಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement