ಶಾಕಿಂಗ್‌ : ಮಾಜಿ ಪತ್ನಿಯನ್ನು ಬೈಕಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ವ್ಯಕ್ತಿ…!

ಬಹ್ರೈಚ್ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯನ್ನು ಮೋಟಾರ್‌ ಸೈಕಲ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದು ಕೊಲೆಗೆ ಯತ್ನಿಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಹಾಗೂ ಆರೋಪಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಯನ್ನು ರಾಮಗಾಂವ್ ಪ್ರದೇಶದ ಮುಸಲ್ಲಂಪುರ ನಿವಾಸಿ ರಹೀಸ್ ಎಂದು ಗುರುತಿಸಲಾಗಿದೆ. ಈತ ನನ್‌ಪಾರಾ ನಿವಾಸಿ ರೇಶ್ಮಾ ಎಂಬಾಕೆಯನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ದಂಪತಿಯ ನಡುವೆ ಸದಾ ಕಲಹ ಉಂಟಾಗುತ್ತಿದ್ದ ಕಾರಣ, ಕಳೆದ ಜನವರಿ ತಿಂಗಳಲ್ಲಿ ಕಾನೂನುಬದ್ಧವಾಗಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ಅಂದಿನಿಂದ ರೇಶ್ಮಾ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಆರೋಪಿ ಬುಧವಾರ ನಾನ್‌ಪಾರಾಕ್ಕೆ ಬಂದು ಲಕ್ಷ್ಮಣಪುರ ಮಾತೇಹಿ ಗ್ರಾಮದ ಬಳಿ ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ರೇಶ್ಮಾ ಅವರು ಎದುರಾಗಿದ್ದಾರೆ. ರಹೀಸ್, ಆಕೆಯೊಂದಿಗೆ ಜಗಳ ತೆಗೆದಿದ್ದಾನೆ. ವಾದ-ವಿವಾದ ಜೋರಾದಾಗ ಆಕ್ರೋಶಗೊಂಡ ರಹೀಸ್, ಮೊದಲು ತನ್ನ ಬೈಕ್‌ನಿಂದ ರೇಶ್ಮಾಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಆಕೆಯನ್ನು ಬೈಕ್‌ನ ಹಿಂಭಾಗಕ್ಕೆ ಕಟ್ಟಿ, ರಸ್ತೆಯಲ್ಲಿ ಬೈಕ್‌ ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ರಕ್ಷಣೆಗೆ ಧಾವಿಸಿದ ಸಾರ್ವಜನಿಕರು
ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ರಹೀಸ್‌ನನ್ನು ತಡೆದ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸಿದ್ದಾರೆ. ರೊಚ್ಚಿಗೆದ್ದ ಸಾರ್ವಜನಿಕರು ಆರೋಪಿ ರಹೀಸ್‌ಗೆ ಥಳಿಸಿದ್ದು, ಆತನೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾಹಿತಿ ಪಡೆದ ನಾನ್‌ಪಾರಾ ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರನ್ನೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾನೂನು ಕ್ರಮ
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸರ್ಕಲ್ ಅಧಿಕಾರಿ, “ಆರೋಪಿ ರಹೀಸ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕೊಲೆ ಯತ್ನ, ದೈಹಿಕ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ನಿಂದನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.
ಈ ಘಟನೆಯು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement