ಪ್ರಸ್ತುತ ಜಗತ್ತು ರಷ್ಯಾ-ಉಕ್ರೇನ್ ನಡುವಿನ ಸುದೀರ್ಘ ಯುದ್ಧ ಹಾಗೂ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿದೆ. ವರ್ಷಗಟ್ಟಲೆ ನಡೆಯುವ ಇಂತಹ ಯುದ್ಧಗಳ ನಡುವೆ, ಇತಿಹಾಸದ ಪುಟಗಳನ್ನು ತಿರುವಿದಾಗ ಒಂದು ಅಚ್ಚರಿಯ ವಿಷಯ ಬೆಳಕಿಗೆ ಬರುತ್ತದೆ. ಅದುವೇ ವಿಶ್ವದ ಅತ್ಯಂತ ಕಿರು ಯುದ್ಧ. ಈ ಯುದ್ಧವು ಕೇವಲ 45 ನಿಮಿಷಗಳಲ್ಲಿ ಅಂತ್ಯಗೊಂಡಿತ್ತು !
ಸುಮಾರು 130 ವರ್ಷಗಳ ಹಿಂದೆ, ಅಂದರೆ 1896ರ ಆಗಸ್ಟ್ 27ರಂದು ನಡೆದ ಈ ಸಮರವನ್ನು ಇತಿಹಾಸದಲ್ಲಿ ‘ಆಂಗ್ಲೋ-ಜಂಜಿಬಾರ್ ಯುದ್ಧ’ (Anglo-Zanzibar War) ಎಂದು ಕರೆಯಲಾಗುತ್ತದೆ. ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಆರಂಭವಾದ ಈ ಯುದ್ಧ, 9:45ರ ವೇಳೆಗೆ ಸಂಪೂರ್ಣವಾಗಿ ಮುಕ್ತಾಯವಾಗಿತ್ತು.
ಯುದ್ಧಕ್ಕೆ ಕಾರಣವಾಗಿದ್ದೇನು?
ಬ್ರಿಟಾನಿಕಾ ವರದಿಯ ಪ್ರಕಾರ, ಈ ಸಂಘರ್ಷ ಬ್ರಿಟಿಷ್ ಪಡೆಗಳು ಮತ್ತು ಜಂಜಿಬಾರ್ ಸುಲ್ತಾನರ ನಡುವೆ ನಡೆದಿದೆ. ಜಂಜಿಬಾರ್‌ನ ಸುಲ್ತಾನ ಹಮದ್ ಬಿನ್ ತುವೈನಿ ಅವರ ಮರಣದ ನಂತರ, ಅವರ ಉತ್ತರಾಧಿಕಾರಿಯಾಗಿ ಖಾಲಿದ್ ಬಿನ್ ಬರ್ಘಾಶ್ ಬ್ರಿಟಿಷರ ಅನುಮತಿಯಿಲ್ಲದೆ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬ್ರಿಟಿಷ್ ಅಧಿಕಾರಿಗಳು ಇದನ್ನು ಒಪ್ಪದೆ, ಖಾಲಿದ್ ಪದತ್ಯಾಗ ಮಾಡಬೇಕೆಂದು ಪಟ್ಟು ಹಿಡಿದರು. ಇದುವೇ ‘ಆಂಗ್ಲೋ-ಜಂಜಿಬಾರ್ ಯುದ್ಧ’ಕ್ಕೆ ನಾಂದಿ ಹಾಡಿತು.
ಬ್ರಿಟಿಷರ ಎಚ್ಚರಿಕೆ ಮತ್ತು 45 ನಿಮಿಷಗಳ ಅಬ್ಬರ
ಬ್ರಿಟಿಷ್ ಪಡೆಗಳು ಸುಲ್ತಾನನಿಗೆ ಬೆಳಿಗ್ಗೆ 9 ಗಂಟೆಯೊಳಗೆ ಅಧಿಕಾರದಿಂದ ಕೆಳಗಿಳಿಯುವಂತೆ ಅಂತಿಮ ಗಡುವು (Ultimatum) ನೀಡಿದ್ದವು. ಆದರೆ ಸುಲ್ತಾನ್ ಖಾಲಿದ್ ಇದಕ್ಕೆ ಸೊಪ್ಪು ಹಾಕಲಿಲ್ಲ.
ಬ್ರಿಟಿಷ್ ಯುದ್ಧನೌಕೆಗಳು ಬಂದರಿನಿಂದ ಬೆಳಿಗ್ಗೆ 9:02ಕ್ಕೆ ಸುಲ್ತಾನನ ಅರಮನೆಯ ಮೇಲೆ ಗುಂಡಿನ ದಾಳಿ ಆರಂಭಿಸಿದವು. ಈ ಯುದ್ಧದಲ್ಲಿ ಬ್ರಿಟಿಷರ ಶಕ್ತಿ ಅಪಾರವಾಗಿತ್ತು. ದಾಳಿಯ ವೇಳೆ ಸುಲ್ತಾನನ ಅರಮನೆ ಧ್ವಂಸಗೊಂಡಿತು ಮತ್ತು ಸುಲ್ತಾನನ ಏಕೈಕ ರಾಜವೈಭವದ ನೌಕೆಯಾದ ‘HHS ಗ್ಲ್ಯಾಸ್ಗೋ’ ಅನ್ನು ಬ್ರಿಟಿಷರು ನಾಶಪಡಿಸಿದರು.ಬೆಳಿಗ್ಗೆ 9:40/9:45 ಸುಮಾರಿಗೆ ಸುಲ್ತಾನನ ಧ್ವಜವನ್ನು ಕೆಳಗಿಳಿಸಲಾಯಿತು ಮತ್ತು ಹೋರಾಟ ನಿಂತಿತು.
ಸಾವು-ನೋವಿನ ಲೆಕ್ಕಾಚಾರ
ಈ ಕಿರು ಯುದ್ಧವು ಜಂಜಿಬಾರ್ ಪಾಲಿಗೆ ಭೀಕರವಾಗಿತ್ತು. ಕೇವಲ 45 ನಿಮಿಷಗಳಲ್ಲಿ ಜಂಜಿಬಾರ್‌ನ ಸುಮಾರು 500 ಜನರು ಮೃತಪಟ್ಟರು ಅಥವಾ ಗಾಯಗೊಂಡರು. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಬ್ರಿಟಿಷ್ ಪಡೆಗಳಲ್ಲಿ ಕೇವಲ ಒಬ್ಬ ನಾವಿಕ ಮಾತ್ರ ಗಾಯಗೊಂಡಿದ್ದ.
ಇಂದಿನ ಆಧುನಿಕ ಯುಗದಲ್ಲಿ ಯುದ್ಧಗಳು ತಿಂಗಳುಗಳು ಹಾಗೂ ವರ್ಷಗಳ ಕಾಲ ಮುಂದುವರಿಯುತ್ತಿದ್ದರೆ, 1896ರ ಈ ಆಂಗ್ಲೋ-ಜಂಜಿಬಾರ್ ಯುದ್ಧವು ಮಾನವ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಮುಕ್ತಾಯಗೊಂಡ ಯುದ್ಧ ಎಂಬ ದಾಖಲೆಯನ್ನು ಇಂದಿಗೂ ಉಳಿಸಿಕೊಂಡಿದೆ.
ಜಂಜಿಬಾರ್ ಎಲ್ಲಿದೆ…?
ಜಂಜಿಬಾರ್ ಹಿಂದೂ ಮಹಾಸಾಗರದಲ್ಲಿದ್ದ ಒಂದು ದ್ವೀಪ ರಾಷ್ಟ್ರವಾಗಿದ್ದು, ಇದು ಟಾಂಗನಿಕಾ ಕರಾವಳಿಯ ಸಮೀಪದಲ್ಲಿದೆ; ಇಂದು ಇದು ಆಫ್ರಿಕಾ ಖಂಡದ ತಾಂಜಾನಿಯಾ ದೇಶದ ಒಂದು ಭಾಗವಾಗಿದೆ. ಇದರ ಪ್ರಮುಖ ದ್ವೀಪವಾದ ಉಂಗುಜಾ (ಅಥವಾ ಜಂಜಿಬಾರ್ ದ್ವೀಪ), 1698 ರಿಂದ ಹೆಸರಿಗಷ್ಟೇ ಓಮನ್ ಸುಲ್ತಾನರ ನಿಯಂತ್ರಣದಲ್ಲಿತ್ತು. ಅದಕ್ಕೂ ಮೊದಲು, ಅಂದರೆ 1499ರಿಂದ ಅಲ್ಲಿ ನೆಲೆಸಿದ್ದ ಪೋರ್ಚುಗೀಸರನ್ನು ಓಮನ್ ಸುಲ್ತಾನರು 1698 ರಲ್ಲಿ ಹೊರಹಾಕಿದ್ದರು.
ಸುಲ್ತಾನ್ ಮಜೀದ್ ಬಿನ್ ಸೈದ್ ಅವರು 1858 ರಲ್ಲಿ ಈ ದ್ವೀಪವನ್ನು ಓಮನ್‌ನಿಂದ ಸ್ವತಂತ್ರವೆಂದು ಘೋಷಿಸಿದರು. ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್) ಇದನ್ನು ಅಂಗೀಕರಿಸಿತು ಮತ್ತು ಈ ಮೂಲಕ ಜಂಜಿಬಾರ್ ಸುಲ್ತಾನೇಟ್ ಅನ್ನು ಓಮನ್ ಸುಲ್ತಾನೇಟ್‌ನಿಂದ ಬೇರ್ಪಡಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ