ಮಂಗಳೂರು: ಜೀವನದಲ್ಲಿ ಎದುರಾಗುವ ಕಷ್ಟಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು ಎಂಬುದಕ್ಕೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಒಂದು ನಿದರ್ಶನವಾಗಿ ಹೊರಹೊಮ್ಮಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವಾಗಲೇ ಹೆತ್ತ ತಾಯಿಯನ್ನು ಕಳೆದುಕೊಂಡ ತೀವ್ರ ದುಃಖದಲ್ಲೂ ಧೃತಿಗೆಡದ ದಿಶಾ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಷ್ಟೇ ಅಲ್ಲ, 600 ಕ್ಕೆ 600 ಅಂಕ ಗಳಿಸುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ದಕ್ಷಿಣ ಕನ್ನಡದ ಈ ವಿದ್ಯಾರ್ಥಿನಿಯ ಕಥೆ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.
ಮೂಡುಬಿದಿರೆಯ ವಿದ್ಯಾಗಿರಿ ಸಮೀಪದ ಪುಟ್ಟಿಗೆ ಪಾದವಿನ ದಿನೇಶ ಮತ್ತು ಸವಿತಾ ದಂಪತಿಯ ಪುತ್ರಿಯಾದ ದಿಶಾ ಅವರು ಪರೀಕ್ಷೆಗೆ ಅತ್ಯುತ್ತಮವಾಗಿ ಸಿದ್ಧತೆ ನಡೆಸಿದ್ದರು. ಆದರೆ ಗಣಿತ ಪರೀಕ್ಷೆಯ ಮುನ್ನಾ ದಿನ ಅವರ ತಾಯಿ ಅನಿರೀಕ್ಷಿತವಾಗಿ ಬಿದ್ದು ಗಾಯಗೊಂಡಿದ್ದರು. ಮೊದಲ ಮೂರು ಪರೀಕ್ಷೆಗಳು ಮುಗಿದಿದ್ದವು. ಆದರೆ, ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ನೋಡಿದ್ದು ಅಮ್ಮನ ಮೃತದೇಹವನ್ನು. ಅರ್ಥಶಾಸ್ತ್ರ (Economics) ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ತಾಯಿ ಮೃತಪಟ್ಟಿದ್ದರು. ಅಮ್ಮನಿಲ್ಲದ ಆ ಘೋರ ಕ್ಷಣ ಸಿಡಿಲು ಬಡಿದಂತಿತ್ತು.
ದುಃಖದ ನಡುವೆಯೂ ಸಾಧನೆ
ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಹ ಪರಿಸ್ಥಿತಿ ಎದುರಾಯಿತು. ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಮೂರು ಪರೀಕ್ಷೆಗಳು. ತಾಯಿಯ ಅಗಲಿಕೆಯ ಆ ಭೀಕರ ನೋವಿನ ನಡುವೆಯೇ ಉಕ್ಕಿ ಬರುವ ಕಣ್ಣೀರನ್ನು ಒರೆಸಿಕೊಂಡು ಉಳಿದ ಪರೀಕ್ಷೆಗಳನ್ನು ಬರೆಯಲು ಮುಂದಾದರು. ತನ್ನ ಬದುಕಿನ ದೊಡ್ಡ ಆಧಾರಸ್ತಂಭವನ್ನೇ ಕಳೆದುಕೊಂಡ ಅತೀವ ನೋವಿನ ನಡುವೆಯೂ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಮಾಡಿದರು. ವರ್ಷಗಳ ತಾಯಿಯ ಕನಸನ್ನು ನನಸಾಗಿಸಲು ಅವರು ಕಣ್ಣೀರು ಒರೆಸಿಕೊಂಡು ಪರೀಕ್ಷೆಗೆ ಹಾಜರಾದರು.
ಅವರ ಈ ಹೋರಾಟಕ್ಕೆ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸಂಪೂರ್ಣ ಬೆಂಬಲವಾಗಿ ನಿಂತರು. “ಆ ಸಮಯದಲ್ಲಿ ಏನು ಮಾಡಬೇಕೆಂದು ನನಗೆ ತಿಳಿಯದಾಗಿತ್ತು. ಆದರೆ, ನನ್ನ ಅಮ್ಮನಿಗೋಸ್ಕರವಾದರೂ ನಾನು ಇದನ್ನು ಸಾಧಿಸಬೇಕು ಎಂದು ನಿರ್ಧರಿಸಿದೆ ಎಂದು ದಿಶಾ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದರು. ಅಮ್ಮ ಈಗ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಎಂದು ಹೇಳುವಾಗ ಅವರಿಗೆ ಕಣ್ಣೀರು ಒತ್ತರಿಸಿ ಬಂತು.
ಭವಿಷ್ಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗುವ ಕನಸು ಹೊಂದಿರುವ ಈಕೆಯ ಅಪ್ರತಿಮ ಸಾಧನೆ, ಸಾವಿರಾರು ಮನಸ್ಸುಗಳಿಗೆ ಇಂದು ಸ್ಫೂರ್ತಿಯ ಸೆಲೆಯಾಗಿದೆ. ನೋವು ಎಷ್ಟೇ ಇದ್ದರೂ, ಗುರಿ ಸ್ಪಷ್ಟವಾಗಿದ್ದರೆ ಸಾಧನೆ ಸಾಧ್ಯ ಎಂಬುದನ್ನು ಈ ಹೆಣ್ಣುಮಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ.


ನಿಮ್ಮ ಕಾಮೆಂಟ್ ಬರೆಯಿರಿ