ಅಪರೂಪದ ದೃಶ್ಯ : ರಾಜಕೀಯ ವೈರಿಗಳಾದ ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಧ್ಯೆ ಸೌಹಾರ್ದಯುತ ಮಾತುಕತೆ ; ವಿಡಿಯೋ ವೈರಲ್!

ನವದೆಹಲಿ: ಸಂಸತ್ತಿನಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಡುವೆ ನಡೆದ ಸೌಹಾರ್ದಯುತ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಇವರಿಬ್ಬರ ನಡುವಿನ ಸಂವಾದ ಕಡಿಮೆ ಅವಧಿಯದ್ದಾಗಿದ್ದರೂ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆಗಾಗ್ಗೆ ನಡೆಯುವ ವಾಗ್ಯುದ್ಧಗಳ ಮಧ್ಯೆ ಇದು ಸಾಕಷ್ಟು ಗಮನ ಸೆಳೆಯುತ್ತಿದೆ.
ಸಮಾಜ ಸುಧಾರಕ ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮದಿನೋತ್ಸವದ ಅಂಗವಾಗಿ ಶನಿವಾರ ಸಂಸತ್ತಿನ ಸಂಕೀರ್ಣದಲ್ಲಿ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ನಾಯಕರು ಒಟ್ಟಾಗಿ ಭಾಗವಹಿಸಿದ್ದರು.

ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಪ್ರಧಾನಿ
ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಅರ್ಜುನರಾಮ ಮೇಘವಾಲ್ ಅವರನ್ನು ಅಭಿನಂದಿಸಿದರು. ಬಳಿಕ ರಾಹುಲ್ ಗಾಂಧಿ ಅವರ ಬಳಿ ತೆರಳಿ ವಿಶೇಷವಾಗಿ ಮಾತುಕತೆ ನಡೆಸಿದರು.
ಮೂಲಗಳ ಪ್ರಕಾರ, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ವಿಚಾರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಅಮ್ಮನ ಆರೋಗ್ಯ ಸುಧಾರಿಸುತ್ತಿದೆ” ಎಂದು ಮಾಹಿತಿ ನೀಡಿದರು. ಈ ಬಗ್ಗೆ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿ, ಸೋನಿಯಾ ಗಾಂಧಿ ಅವರಿಗೆ ಶುಭ ಹಾರೈಸಿದರು ಎನ್ನಲಾಗಿದೆ.
ಸಿಸ್ಟಮಿಕ್ ಇನ್ಫೆಕ್ಷನ್ (ರಕ್ತಕ್ಕೆ ಹರಡುವ ಸೋಂಕು) ಕಾರಣದಿಂದ ಮಾರ್ಚ್ 24ರಂದು ಜ್ವರ ಬಂದಿದ್ದರಿಂದ ದೆಹಲಿಯ ಸರ್ ಗಂಗಾರಾಮ ಆಸ್ಪತ್ರೆಗೆ ದಾಖಲಾಗಿದ್ದ ಸೋನಿಯಾ ಗಾಂಧಿ ಅವರು, ಚಿಕಿತ್ಸೆಯ ನಂತರ ಮಾರ್ಚ್ 31ರಂದು ಬಿಡುಗಡೆಯಾಗಿದ್ದರು.

ಮಹಾತ್ಮ ಫುಲೆ ಸ್ಮರಿಸಿದ ಪ್ರಧಾನಿ
ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ ‘X’ (ಟ್ವಿಟರ್) ಮೂಲಕ ಮಹಾತ್ಮ ಫುಲೆ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, “ಫುಲೆ ಅವರು ಇಂದಿನ ಯುಗಕ್ಕೆ ದಾರಿದೀಪವಾಗಿದ್ದಾರೆ. ಶಿಕ್ಷಣ ಮತ್ತು ಸರ್ವರ ಕಲ್ಯಾಣಕ್ಕೆ ಅವರು ನೀಡಿದ ಒತ್ತು ಇಂದಿಗೂ ಪ್ರಸ್ತುತ” ಎಂದು ಬಣ್ಣಿಸಿದರು. ಸಂಸತ್ತಿನಲ್ಲಿ ಪುಷ್ಪ ನಮನ ಸಲ್ಲಿಸಿದ ನಂತರ, “ಅವರ ಆದರ್ಶಗಳು ಅಸಂಖ್ಯಾತ ಜನರಿಗೆ ಶಕ್ತಿ ಮತ್ತು ಭರವಸೆಯನ್ನು ನೀಡುತ್ತಿರಲಿ” ಎಂದು ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement