ಅಕ್ಷರ ಲೋಕದ ಅಪರೂಪದ ಶಿಲ್ಪಿ: ಪ್ರೊ. ಎಂ.ಆರ್. ಕುಂಬಾರ ಶತಮಾನದ ಸ್ಮರಣೆ

(೧೬-೦೪-೨೦೨೬ ರಂದು ಕರ್ನಾಟಕ ವಿಶ್ವವಿದ್ಯಾಲಯದ ಗೊಲ್ಡನ್ ಜುಬಲಿ ಹಾಲ್‌ನಲ್ಲಿ ಪ್ರೊ. ಎಂ.ಆರ್. ಕುಂಬಾರ ಅವರ ಜನ್ಮ ಶತಮಾನೋತ್ಸವ ಸವಿನೆನಪಿಗಾಗಿ ೨ ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ನಡೆಯುತ್ತಿದ್ದು, ಆ ನಿಮಿತ್ತ ಲೇಖನ)
ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಎಂದಾಕ್ಷಣ ತಟ್ಟನೆ ಸ್ಮರಣೆಗೆ ಬರುವವರೆಂದರೆ ಪ್ರೊ. ಎಂ.ಆರ್. ಕುಂಬಾರ, ಪ್ರೊ.ಕೆ.ಎಸ್. ದೇಶಪಾಂಡೆ ಮತ್ತು ಡಾ.ಎಸ್.ಆರ್. ಗುಂಜಾಳ ಅವರು. ಕರ್ನಾಟಕದಲ್ಲಿ ಗ್ರಂಥಾಲಯಗಳ ಶಿಕ್ಷಣ, ಅಭಿವೃದ್ಧಿ ಮತ್ತು ಸಂಶೋಧನೆಗೆ ಈ ತ್ರಿಮೂರ್ತಿಗಳು ನೀಡಿದ ಕಾಣಿಕೆಯನ್ನು ಸದಾ ಸ್ಮರಿಸಲಾಗುತ್ತದೆ.
ಧಾರವಾಡ ಜಿಲ್ಲೆಯ ಸವಣೂರ ತಾಲೂಕಿನ ಮಾಹೂರು ಗ್ರಾಮದ ಮಹದೇವಗೌಡ ರುದ್ರಗೌಡ ಕುಂಬಾರ (ಜನನ ೧೬.೦೪.೧೯೨೫, ನಿಧನ ೨೩.೬.೧೯೯೩) ಅವರು ಪ್ರೊ.ಎಂ.ಆರ್. ಕುಂಬಾರ ಎಂದೇ ನಾಡಿಗೆ ಚಿರಪರಿಚಿತರು. ೧೯೪೯ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕಿರಿಯ ಗುಮಾಸ್ತರಾಗಿ ಸೇವೆ ಆರಂಭಿಸಿದ ಅವರು ತಮ್ಮ ಕರ್ತೃತ್ವ ಶಕ್ತಿ ಮತ್ತು ಅಧ್ಯಯನಶೀಲತೆಯಿಂದ ಗ್ರಂಥಾಲಯ ವಿಜ್ಞಾನದ ಅಧ್ಯಾಪಕರಾಗಿ, ಮುಖ್ಯಸ್ಥರಾಗಿ, ಗ್ರಂಥಪಾಲಕರಾಗಿ, ಸಿಂಡಿಕೇಟ್‌ ಸದಸ್ಯರಾಗಿ, ಸಮಾಜ ವಿಜ್ಞಾನ ಡೀನ್‌ ಆಗಿ, ವಿಶ್ವವಿದ್ಯಾಲಯ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮದ ಪ್ರಥಮ ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸಿದ್ದಾರೆ. ೩೩ ವರ್ಷಗಳ ಸುಧೀರ್ಘ ಅವಧಿಯಲ್ಲಿ ಹಲವಾರು ನೂತನ ವಿಕ್ರಮಗಳನ್ನು ಸಾಧಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ವಿಶ್ವವಿದ್ಯಾಲಯದ ನಿವೃತ್ತಿಯ ನಂತರ ಮಣಿಪುರ ರಾಜ್ಯ ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಹೊಸ ಸ್ವರೂಪ ನೀಡಿದವರು ಇವರು. ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಪ್ರೀತಿಯ ಶಿಷ್ಯರಾಗಿದ್ದ ಕುಂಬಾರ ಅವರು ರಂಗನಾಥನ್ ಅವರ ಆದರ್ಶ ತತ್ವ, ಕಾರ‍್ಯಶೈಲಿಯನ್ನು ಜೀವನುದುದ್ದಕ್ಕೂ ಪಾಲಿಸಿಕೊಂಡು ಬಂದವರು.
ಗ್ರಂಥಗಳ ವರ್ಗೀಕರಣ ಬಗೆಗೆ ಅಧಿಕೃತವಾಗಿ ಕಲಿಸಬಲ್ಲ ಮತ್ತು ಮಾತನಾಡಬಲ್ಲ ಪ್ರಾಧ್ಯಾಪಕರಲ್ಲಿ ಒಬ್ಬರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ೧೬ ಸಂಶೋಧಕರು ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದಾರೆ. ೧೪೦ಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಮಂಡನೆಯಾಗಿವೆಯಲ್ಲದೇ ೧೭ ಗ್ರಂಥಗಳ ಸಂಪಾದಕರಾಗಿ ಕಾರ‍್ಯನಿರ್ವಹಿಸಿದ್ದಾರೆ. ಮರಾಠವಾಡ, ಸಂಬಳಪುರ ಮತ್ತು ಮಣಿಪುರ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಅಲ್ಲಿಯ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ದೇಶ-ವಿದೇಶಗಳಲ್ಲಿ ಅವರ ಹಲವಾರು ಶಿಷ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಂಥಾಲಯದ ಪರಿಣಿತರಾದ ಆರ್. ಶಿವಣ್ಣ ಅವರು ಕರ್ಮಯೋಗಿ ಪ್ರೊ. ಎಂ.ಆರ್. ಕುಂಬಾರ ಅವರ ಗ್ರಂಥವನ್ನು ೨೦೧೧ ರಲ್ಲಿ ಬೆಂಗಳೂರಿನ ಬಸವ ತತ್ವ ಪ್ರಚಾರ ಹಾಗೂ ಸಂಶೋಧನಾ ಕೇಂದ್ರ ಪ್ರಕಾಶನದಿಂದ ಪ್ರಕಟಿಸಿದ್ದಾರೆ.
ಸಂಪ್ರದಾಯ ಹಿನ್ನಲೆಯ ಕುಟುಂಬ ಮತ್ತು ಗೌಡಕಿ ಮನೆತನದ ಪ್ರೊ. ಎಂ.ಆರ್. ಕುಂಬಾರ ಅವರು ಕಾಯಕ ದಾಸೋಹ ಪರಂಪರೆಯನ್ನು ತಮ್ಮ ಜೀವನದುದ್ದಕ್ಕೂ ನೆಡೆಸಿಕೊಂಡು ಬಂದವರಾಗಿದ್ದಾರೆ. ಪ್ರೊ. ಎಂ.ಆರ್. ಕುಂಬಾರ ಅವರ ವ್ಯಕ್ತಿತ್ವಕ್ಕೆ ನೂತನ ಸ್ಪರ್ಶ ಕೊಟ್ಟವರೇ ಅವರ ಧರ್ಮಪತ್ನಿ ಶ್ರೀಮತಿ ಬಸವಣ್ಣೆಮ್ಮ ಅವರು. ಪ್ರೊ.ಎಂ.ಆರ್. ಕುಂಬಾರ ಅವರ ಉಳಿತಾಯ ಹಣವನ್ನು ಮತ್ತು ತಮಗೆ ಬರುತ್ತಿದ್ದ ಪಿಂಚಣಿ ಹಣವನ್ನು ಉಳಿಸಿ, ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಪಾಲಕರಿಗೆ ಉಪಯುಕ್ತವಾಗಲಿ ಎಂದು ಪ್ರೊ.ಎಂ.ಆರ್. ಕುಂಬಾರ ಸ್ಮರಣಾರ್ಥ ಉಪನ್ಯಾಸ ಏರ್ಪಡಿಸಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರೂ. ೫೦,೦೦೦/- ದತ್ತಿನಿಧಿಯನ್ನು ಮತ್ತು ವಿಭಾಗಕ್ಕೆ ಪ್ರಥಮ ಬಂದ ವಿದ್ಯಾರ್ಥಿಗೆ ಬಂಗಾರ ಪದಕ ನೀಡಲು
ರೂ. ೨೫,೦೦೦/- ಠೇವಣಿಯನ್ನು ಇಟ್ಟಿದ್ದಾರೆ. ಕಳೆದ ೧೪ ವರ್ಷಗಳಿಂಲೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯಗಳ ಮೇಲೆ ತಜ್ಞರ ಉಪಯುಕ್ತ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬರಲಾಗುತ್ತಿದೆ. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರೊ. ಎಂ.ಆರ್. ಕುಂಬಾರ ದತ್ತಿ ನಿಧಿಯನ್ನು ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್​ನಲ್ಲಿ ಮದುವೆ ಆಮಂತ್ರಣ ಕಾರ್ಡ್‌ ಬಂದ್ರೆ ಕ್ಲಿಕ್ ಮಾಡುವ ಮುನ್ನ ಎಚ್ಚರ ; ಕ್ಲಿಕ್ ಮಾಡಿ 10 ಲಕ್ಷ ರೂ. ಕಳೆದುಕೊಂಡ ಅಧಿಕಾರಿ !

ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ವಿಜ್ಞಾನ ವಿಭಾಗಕ್ಕೆ ಪ್ರೊ. ಎಂ.ಆರ್. ಕುಂಬಾರ ಭದ್ರವಾದ ಅಡಿಪಾಯವನ್ನು ಹಾಕಿದ್ದು, ಪ್ರೊ. ಕೆ.ಎಸ್. ದೇಶಪಾಂಡೆ, ಡಾ.ಎಸ್.ಆರ್. ಗುಂಜಾಳ, ಬಿ.ಬಿ. ಹುನಗುಂದ, ಆರ್.ಆರ್. ಅತಗೂರ, ವಿ.ವಿ.ಹೆಬ್ಬಳ್ಳಿ, ಮಿಸ್.ಜಿ.ಜಿ. ನಾಡಿಗೇರ, ಡಾ.ಎಸ್.ಅರ್. ಇಜಾರಿ, ಪ್ರೊ. ಆರ್.ಸಿ. ಪಾಟೀಲ, ಡಾ. ಸಿ.ಆರ್. ಕರಿಸಿದ್ಧಪ್ಪ, ಡಾ. ಎಸ್.ಎಲ್. ಸಂಗಮ, ಡಾ. ಬಿ.ಡಿ. ಕುಂಬಾರ, ಪ್ರೊ. ಬಿ.ವಿ. ರಾಜಶೇಖರ, ಡಾ. ಎ.ಕೆ. ಬರಡೊರ, ಡಾ ಬಿ.ಎಸ್. ಮಹೇಶ್ವರಪ್ಪ, ಡಾ. ಪಿ.ವಿ. ಕೊಣ್ಣೂರ, ಡಾ.ಕೇಶವ ಈ ವಿಭಾಗವನ್ನು ಅಭಿವೃದ್ಧಿಗೊಳಿಸಿದ್ದಾರೆ.
ಸದ್ಯ ಡಾ. ಸಿ. ಕೃಷ್ಣಮೂರ್ತಿ, ಪ್ರಾಧ್ಯಾಪಕರು ಮತ್ತು ಚೇರಮನ್ ಆಗಿ, ಹಿರಿಯ ಪ್ರಾಧ್ಯಾಪಕರಾಗಿ ಡಾ. ರಮೇಶ ಆರ್. ನಾಯಕ, ಪ್ರಾಧ್ಯಾಪಕರಾಗಿ ಡಾ. ಗುರುರಾಜ ಹಡಗಲಿ, ಸಹಾಯಕ ಪ್ರಾಧ್ಯಾಪಕರಾಗಿ ಡಾ. ಅನಿಲ ತಳವಾರ ಅವರು ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಈವರೆಗೆ ೨೦೦೦ಕ್ಕೂ ಹೆಚ್ಚಿನ ವೃತ್ತಿ ಪರಿಣಿತರನ್ನು ಸೃಷ್ಟಿಸಿದೆ. ವಿಭಾಗದಿಂದ ೧೩೨ಕ್ಕೂ ಹೆಚ್ಚಿನ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ೩೦ ವಿದ್ಯಾರ್ಥಿಗಳು ಮತ್ತು ೨೫ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿ.ಎಚ್.ಡಿ. ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.
ಡಾ. ಸಿ. ಕೃಷ್ಣಮೂರ್ತಿ ಅವರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಮತ್ತು ಹಣಕಾಸು ಅಧಿಕಾರಿಯಾಗಿ ಕಾರ್ಯ ಮಾಡಿದ್ದಾರೆ. ಡಾ. ಗುರುರಾಜ ಹಡಗಲಿ ವಿಶ್ವವಿದ್ಯಾಲಯದ ಯು.ಯು.ಸಿ.ಎಮ್.ಎಸ್. ನೋಡಲ್ ಅಧಿಕಾರಿಯಾಗಿ ಮತ್ತು ಪ್ರಾಧ್ಯಾಪಕರಾಗಿದ್ದ ಡಾ. ಬಿ.ಡಿ. ಕುಂಬಾರ ಅವರು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement