ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಕಾರು ಹಿಂದಿಕ್ಕುವ ವಿಚಾರಕ್ಕೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಮಾಜಿ ಸಂಸದ ಅನಂತಕುಮಾರ ಹೆಗಡೆ (Anantkumar Hegde) ಪುತ್ರ ಅಶುತೋಷ ಹೆಗಡೆ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಗುರುವಾರ ಹೈಕೋರ್ಟ್ ತಡೆ ನೀಡಿದೆ.
ಎಫ್‌ಐಆರ್ ಮತ್ತು ಆರೋಪ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೇ ಇರುವುದರಿಂದ ಪ್ರಕರಣದಿಂದ ಕೈಬಿಡುವಂತೆ ಕೋರಿ ಅಶುತೋಷ ಹೆಗಡೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನೀಲದತ್ ಯಾದವ್ ಅವರ ಏಕಸದಸ್ಯ ಪೀಠ ತಡೆ ನೀಡಿದೆ ಎಂದು ಬಾರ್ & ಬೆಂಚಚ ವರದಿ ಮಾಡಿದೆ.
ವರದಿ ಪ್ರಕಾರ, ನಾಲ್ಕನೇ ಆರೋಪಿಯಾಗಿರುವ ಅಶುತೋಷ ಅವರ ವಿರುದ್ಧ ಮೇಲ್ನೋಟಕ್ಕೆ ಅಪರಾಧವಾಗುವಂಥ ಆರೋಪಗಳಿಲ್ಲ. ಮುಂದಿನ ವಿಚಾರಣೆಗೆ ಒಳಪಟ್ಟು ಮುಂದಿನ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಹಾಗೂ ನಾಲ್ಕನೇ ಆರೋಪಿಗೆ ಮಾತ್ರ ಮಧ್ಯಂತರ ಆದೇಶ ಸೀಮಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಶುತೋಷ ಪರ ವಕೀಲ ಪವನಚಂದ್ರ ಶೆಟ್ಟಿ ಅವರು “ಎಫ್‌ಐಆರ್ ಅಥವಾ ಆರೋಪ ಪಟ್ಟಿಯಲ್ಲಿ ಅಶುತೋಷ ಅವರ ಹೆಸರಿಲ್ಲ. ತನ್ನ ಅಜ್ಜನನ್ನು ನೋಡಲು ಅವರು ಭಾರತಕ್ಕೆ ಬಂದಿದ್ದರು. ತಂದೆಯ ಅಧಿಕೃತ ಕಾರಿನಲ್ಲಿ ವಾಪಸ್ ಬರುವಾಗ ಕೃತ್ಯ ನಡೆದಿದ್ದು, ಅದರಲ್ಲಿ ಅಶುತೋಷ ಪಾತ್ರವಿಲ್ಲ” ಎಂದು ವಾದಿಸಿದ್ದರು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರು “ಅರ್ಜಿಯಲ್ಲಿ ಮೊದಲಿಗೆ ಅಶುತೋಷ ಪಕ್ಷಕಾರರಾಗಿಲ್ಲ. ಹೀಗಾಗಿ, ತಿದ್ದುಪಡಿ ಅಥವಾ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ ನ್ಯಾಯಾಲಯದ ಅದನ್ನು ಪರಿಗಣಿಸಬಹುದು” ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಮಾಜಿ ಸಂಸದ ಅನಂತಕುಮಾರ ಹೆಗಡೆ ತೆರಳುತ್ತಿದ್ದ ಕಾರನ್ನು, ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತಕುಮಾರ ಹೆಗಡೆ ಚಾಲಕ ಹಾಗೂ ಗನ್ಮ್ಯಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೋವಾ ಕಾರಿನಲ್ಲಿದ್ದ ಕೆಲವರ ಮೇಲೆ ಹಲ್ಲೆ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಸೈಫ್ ಖಾನ್ ಎಂಬವರು ದೂರು ನೀಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ