ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ : ಸ್ಥಿತಿ ಗಂಭೀರ

ಲಾಹೋರ್: ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಹಾಗೂ ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ನ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪ್ರಸ್ತುತ ಹಮ್ಜಾ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಲಾಹೋರ್‌ನ ಸುದ್ದಿ ಸಂಸ್ಥೆಯೊಂದರ ಕಚೇರಿಯ ಹೊರಗಡೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅಮೀರ್ ಹಮ್ಜಾ ಮೇಲೆ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎನ್ನಲಾಗಿದೆ.

ಯಾರು ಈ ಅಮೀರ್ ಹಮ್ಜಾ?
1980ರ ದಶಕದ ಮಧ್ಯಭಾಗದಲ್ಲಿ ಹಫೀಜ್ ಸಯೀದ್ ಜೊತೆಗೂಡಿ ಲಷ್ಕರ್-ಎ-ತೈಬಾ ಸಂಘಟನೆಯನ್ನು ಕಟ್ಟಿದವರಲ್ಲಿ ಅಮೀರ್ ಹಮ್ಜಾ ಒಬ್ಬ. ಭಾರತದಲ್ಲಿ ನಡೆದ ಹಲವಾರು ಉಗ್ರಗಾಮಿ ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಸಂಘಟನೆಯಲ್ಲಿ ಕೇವಲ ಉಗ್ರನಾಗಿ ಮಾತ್ರವಲ್ಲದೆ, ಆಕ್ರಮಣಕಾರಿ ಭಾಷಣಕಾರ ಮತ್ತು ಬರಹಗಾರನಾಗಿಯೂ ಗುರುತಿಸಿಕೊಂಡಿದ್ದ. ಲಷ್ಕರ್‌ನ ‘ಮಜಲ್ಲಾ ಅಲ್-ದವಾ’ ಪತ್ರಿಕೆಯ ಸಂಸ್ಥಾಪಕ ಸಂಪಾದಕನಾಗಿದ್ದ ಈತ, 2002ರಲ್ಲಿ ಪುಸ್ತಕವೊಂದನ್ನು ಸಹ ಬರೆದಿದ್ದ.
ಅಮೆರಿಕವು ಲಷ್ಕರ್ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಘೋಷಿಸಿದೆ ಮತ್ತು ಅಮೀರ್ ಹಮ್ಜಾನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿ ಆತನ ಮೇಲೆ ನಿರ್ಬಂಧ ಹೇರಿದೆ.
ಅಮೀರ್ ಹಮ್ಜಾ ಸಂಘಟನೆಯ ಕೇಂದ್ರ ನಾಯಕತ್ವದ ಭಾಗವಾಗಿದ್ದು, ಉಗ್ರರ ನೇಮಕಾತಿ, ಹಣಕಾಸು ಸಂಗ್ರಹಣೆ ಮತ್ತು ಜೈಲು ಪಾಲಾದ ಉಗ್ರರ ಬಿಡುಗಡೆಗೆ ಕಾರ್ಯತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement