ನವದೆಹಲಿ: ಅಸ್ಸಾಂ ಪೊಲೀಸರು ದಾಖಲಿಸಿರುವ ಮಾನನಷ್ಟ ಮತ್ತು ಫೋರ್ಜರಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ ಖೇರಾ ಅವರಿಗೆ ನೀಡಲಾಗಿದ್ದ ‘ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು’ ಅವಧಿಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಈ ಮೂಲಕ ಖೇರಾ ಅವರಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಅಸ್ಸಾಂನ ಗುವಾಹಟಿ ಹೈಕೋರ್ಟ್‌ಗೆ ಮೊರೆ ಹೋಗುವಂತೆ ನ್ಯಾಯಾಲಯ ಸೂಚಿಸಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ವಿದೇಶಿ ಪಾಸ್‌ಪೋರ್ಟ್ ಮತ್ತು ಅಘೋಷಿತ ವಿದೇಶಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಪವನ ಖೇರಾ ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಅವರ ವಿರುದ್ಧ ಮಾನನಷ್ಟ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಿದ್ದರು. ಏಪ್ರಿಲ್ 7 ರಂದು ದೆಹಲಿಯಲ್ಲಿರುವ ಖೇರಾ ಅವರ ಮನೆಗೆ ಪೊಲೀಸರು ಭೇಟಿ ನೀಡಿದ್ದರೂ ಅವರು ಲಭ್ಯವಿರಲಿಲ್ಲ. ಆನಂತರ ಖೇರಾ ಅವರು ತೆಲಂಗಾಣ ಹೈಕೋರ್ಟ್‌ನಿಂದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ನೀವು ಅಸ್ಸಾಂಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಿ, ಅಲ್ಲಿನ ನ್ಯಾಯಾಲಯವು ಅದನ್ನು ಪರಿಶೀಲಿಸುತ್ತದೆ” ಎಂದು ಪೀಠವು ಸ್ಪಷ್ಟವಾಗಿ ಹೇಳಿತು.
ಈ ಹಿಂದೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆ ತಡೆಯಾಜ್ಞೆಯನ್ನು ಪ್ರಶ್ನಿಸಿ ಖೇರಾ ಅರ್ಜಿ ಸಲ್ಲಿಸಿದ್ದರು. ಶುಕ್ರವಾರದ ವಿಚಾರಣೆಯ ವೇಳೆ ಖೇರಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ, “ವಾರಾಂತ್ಯದಲ್ಲಿ ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಸೋಮವಾರದವರೆಗೆ ರಕ್ಷಣೆ ನೀಡಿ” ಎಂದು ವಿನಂತಿಸಿದರು. ಆದರೆ, ಸುಪ್ರೀಂ ಕೋರ್ಟ್ ಇದಕ್ಕೆ ಸಮ್ಮತಿಸಲಿಲ್ಲ.
ನ್ಯಾಯಾಲಯದ ಪ್ರಮುಖ ಪ್ರಶ್ನೆಗಳು:
“ನೀವು ನೇರವಾಗಿ ಅಸ್ಸಾಂ ನ್ಯಾಯಾಲಯಕ್ಕೆ ಹೋಗದೆ ತೆಲಂಗಾಣ ಹೈಕೋರ್ಟ್‌ಗೆ ಏಕೆ ಹೋದಿರಿ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಂಘ್ವಿ, ಖೇರಾ ಅವರ ಪತ್ನಿ ತೆಲಂಗಾಣದ ಶಾಸಕ ಅಭ್ಯರ್ಥಿಯಾಗಿದ್ದು, ಅಲ್ಲಿ ಅವರ ಮನೆ ಇರುವುದರಿಂದ ಅಲ್ಲಿಗೆ ಹೋಗಿದ್ದರು ಎಂದು ಸಮರ್ಥಿಸಿಕೊಂಡರು.
ಅರ್ಜಿಯಲ್ಲಿ ಸಲ್ಲಿಸಿದ ತಪ್ಪು ಮಾಹಿತಿಗಳ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಇದು ಕೇವಲ ತಾಂತ್ರಿಕ ದೋಷ ಎಂದು ಸಿಂಘ್ವಿ ವಾದಿಸಿದರೂ, ಅದನ್ನು ನ್ಯಾಯಾಲಯ ಒಪ್ಪಲಿಲ್ಲ.
ಖೇರಾ ಅವರು ಅಸ್ಸಾಂನ ಸಂಬಂಧಿತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದಾಗ, ಈ ಹಿಂದೆ ನೀಡಲಾದ ಅಥವಾ ತಡೆಹಿಡಿಯಲಾದ ಟ್ರಾನ್ಸಿಟ್ ಜಾಮೀನು ಆದೇಶಗಳಿಂದ ಪ್ರಭಾವಿತರಾಗದೆ ಅರ್ಜಿಯ ಅರ್ಹತೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಒಂದು ವೇಳೆ ನ್ಯಾಯಾಲಯ ಕಾರ್ಯನಿರ್ವಹಿಸದಿದ್ದರೆ, ಕಾನೂನಿನ ಚೌಕಟ್ಟಿನಲ್ಲಿ ವಿಷಯವನ್ನು ಪರಿಗಣಿಸಲು ವಿನಂತಿಸಬಹುದು ಎಂದು ಪೀಠ ತಿಳಿಸಿದೆ.
ಅಸ್ಸಾಂ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಪವನ ಖೇರಾ ಅವರು ಬಂಧನದ ಭೀತಿಯಿಂದ ಪಾರಾಗಲು ತಕ್ಷಣವೇ ಅಸ್ಸಾಂ ಹೈಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ