ಪ್ರಧಾನಿ ಮೋದಿ ವಿರುದ್ಧ ‘ಭಯೋತ್ಪಾದಕ’ ಪದ ಬಳಕೆ: ಕಾಂಗ್ರೆಸ್ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ‘ಭಯೋತ್ಪಾದಕ’ ಎಂಬ ಪದವನ್ನು ಬಳಸಿದ ಆರೋಪದ ಮೇಲೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಚುನಾವಣಾ ಆಯೋಗವು ಬುಧವಾರ ನೋಟಿಸ್ ಜಾರಿ ಮಾಡಿದೆ.
ತಮಿಳುನಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಖರ್ಗೆ, ಎಐಎಡಿಎಂಕೆ (AIADMK) ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ಟೀಕಿಸುವ ಸಂದರ್ಭದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಅಣ್ಣಾದೊರೈ ಅವರ ಸಿದ್ಧಾಂತ ಪಾಲಿಸುವ ಎಐಎಡಿಎಂಕೆ ನಾಯಕರು ಮೋದಿ ಅವರೊಂದಿಗೆ ಹೇಗೆ ಕೈಜೋಡಿಸುತ್ತಾರೆ? ಅವರು ಒಬ್ಬ ಭಯೋತ್ಪಾದಕ. ಅವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದ ಮೇಲೆ ನಂಬಿಕೆಯಿಲ್ಲ” ಎಂದು ಖರ್ಗೆ ಆರೋಪಿಸಿದ್ದರು.
ಬಿಜೆಪಿ ನಿಯೋಗದ ದೂರು:
ಖರ್ಗೆ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಕಿರಣ ರಿಜಿಜು ಮತ್ತು ಅರ್ಜುನ ರಾಮ ಮೇಘವಾಲ್ ಅವರನ್ನೊಳಗೊಂಡ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ಸಲ್ಲಿಸಿತ್ತು. ಈ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗವು 24 ಗಂಟೆಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಖರ್ಗೆ ಅವರಿಗೆ ಸೂಚಿಸಿದೆ.
ಖರ್ಗೆ ನೀಡಿದ ಸ್ಪಷ್ಟನೆ:
ವಿವಾದ ತಾರಕಕ್ಕೇರುತ್ತಿದ್ದಂತೆ ಸ್ಪಷ್ಟನೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ತಾವು ಪ್ರಧಾನಿಯವರನ್ನು ವೈಯಕ್ತಿಕವಾಗಿ ಭಯೋತ್ಪಾದಕ ಎಂದು ಕರೆದಿಲ್ಲ ಎಂದು ಹೇಳಿದ್ದಾರೆ. “ನಾನು ಪ್ರಧಾನಿ ವಿರುದ್ಧ ಆ ರೀತಿ ಮಾತನಾಡಿಲ್ಲ. ಅವರು ರಾಜಕಾರಣಿಗಳನ್ನು ಮತ್ತು ಅಭ್ಯರ್ಥಿಗಳನ್ನು ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಇಡಿ (ED), ಸಿಬಿಐ (CBI) ಮತ್ತು ಐಟಿ (IT) ದಾಳಿಗಳ ಮೂಲಕ ‘ತೆರಿಗೆ ಭಯೋತ್ಪಾದನೆ’ (Tax Terrorism) ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ಅವರು ಜನರನ್ನು ಹೆದರಿಸುತ್ತಿದ್ದಾರೆ, ಅಷ್ಟೇ ಹೊರತು ನಾನು ಅವರನ್ನು ಭಯೋತ್ಪಾದಕ ಎನ್ನಲಿಲ್ಲ,” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement