ಕಾರವಾರ: ಸ್ನೇಹಿತನೊಂದಿಗೆ ಊಟಕ್ಕಾಗಿ ಹೋಟೆಲ್‌ಗೆ ಬಂದಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮುಂಡಗೋಡು ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್‌ನಲ್ಲಿ ಈ ಕೃತ್ಯ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಜಮೀರ್ ಅಹಮದ್ ದರ್ಗಾವಾಲೆ (39) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಜಮೀರ್ ಶುಕ್ರವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ತನ್ನ ಸ್ನೇಹಿತನೊಂದಿಗೆ ಊಟಕ್ಕಾಗಿ ಹೋಟೆಲ್‌ಗೆ ಬಂದಿದ್ದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ.ಪ್ರಾಥಮಿಕ ಮಾಹಿತಿಯಂತೆ, ಜಮೀರ್ ಸಿಗರೇಟ್ ತರಲು ತನ್ನ ಸ್ನೇಹಿತನನ್ನು ಹೊರಗೆ ಕಳುಹಿಸಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ನಾಲ್ಕೈದು ಜನ ಅಪರಿಚಿತ ದುಷ್ಕರ್ಮಿಗಳ ತಂಡವು ಹೋಟೆಲ್ ಒಳಗೆ ನುಗ್ಗಿ ಅವರ ಮೇಲೆಏಕಾಏಕಿ ದಾಳಿ ನಡೆಸಿದೆ.
ಕಣ್ಣಿಗೆ ಖಾರದ ಪುಡಿ ಎರಚಿ ಕೃತ್ಯ:
ಲಭ್ಯ ಮಾಹಿತಿ ಪ್ರಕಾರ, ದುಷ್ಕರ್ಮಿಗಳು ಮೊದಲು ಜಮೀರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಇದರಿಂದ ಕಣ್ಣು ಕಾಣಿಸದೆ ಕಂಗೆಟ್ಟ ಅವರು ಜೀವ ಉಳಿಸಿಕೊಳ್ಳಲು ಹೋಟೆಲ್‌ನ ಅಡುಗೆ ಕೋಣೆಯತ್ತ ಓಡಿದ್ದಾರೆ. ಆದರೆ ದುಷ್ಕರ್ಮಿಗಳು ಬೆನ್ನಟ್ಟಿ ಹೋಗಿ, ಅವರನ್ನು ಹಿಡಿದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಘಟನೆಯಿಂದ ಗಾಬರಿಗೊಂಡ ಹೋಟೆಲ್ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡು ಪೊಲೀಸರು ಪರಿಶೀಲನೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ ಜಮೀರ್ ಅವರನ್ನು ಅಪಹರಿಸಿ 30 ಲಕ್ಷ ರೂಪಾಯಿ ಬೇಡಿಕೆಯಿಡಲಾಗಿತ್ತು. ಆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಈಗ ನಡೆದಿರುವ ಕೊಲೆಗೂ ಆ ಹಳೆಯ ಘಟನೆಗೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ