ಮಂಗಳೂರು ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣ : ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಮಂಗಳೂರಿನಲ್ಲಿ ನಡೆದಿದ್ದ  ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ಗೆ  ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನವೆಂಬರ್ 19, 2022 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಶಾರಿಕ್ ಮಂಗಳೂರಿನ ಪ್ರಸಿದ್ಧ ಕದ್ರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಬಾಂಬ್ ಇರಿಸಲು ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲೇ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಅದೃಷ್ಟವಶಾತ್, ಬಾಂಬ್ ಮೊದಲೇ ಸ್ಫೋಟಗೊಂಡಿದ್ದರಿಂದ ಭಾರಿ ದುರಂತವೊಂದು ತಪ್ಪಿದಂತಾಗಿತ್ತು.  ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿತ್ತು. ಸುಮಾರು ಮೂರು ತಿಂಗಳ ಚಿಕಿತ್ಸೆಯ ನಂತರ, ಎನ್‌ಐಎ ಶಾರಿಕ್‌ನನ್ನು ವಶಕ್ಕೆ ಪಡೆದು ಸುದೀರ್ಘ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.
ಮಂಗಳೂರು ಸ್ಫೋಟದ ಸಂಚು ಹೇಗಿತ್ತು?
ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ಮಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸುವ ಗುರಿಯನ್ನು ಶಾರಿಕ್ ಹೊಂದಿದ್ದ. ಮಂಗಳೂರಿನಾದ್ಯಂತ ಸಂಚರಿಸಿ, ಬಾಂಬ್ ಎಲ್ಲಿ ಇಡಬೇಕು ಮತ್ತು ಅದರ ತೀವ್ರತೆ ಎಷ್ಟಿರಬಹುದು ಎಂಬ ಬಗ್ಗೆ ಸೂಕ್ಷ್ಮವಾಗಿ ಸಂಚು ರೂಪಿಸಿದ್ದ.
ನವೆಂಬರ್ 19, 2022 ಸ್ಫೋಟದ ದಿನ ಮೈಸೂರಿನಿಂದ ಬಸ್ ಮೂಲಕ ಮಂಗಳೂರಿಗೆ ಆಗಮಿಸಿದ ಶಾರಿಕ್, ಪಂಪ್‌ವೆಲ್ ಕಡೆಗೆ ಹೋಗಲು ಪುರುಷೋತ್ತಮ ಪೂಜಾರಿಯವರ ಆಟೋ ಏರಿದ್ದನು. ಸಂಜೆ ಸುಮಾರು 4:20 ಗಂಟೆಗೆ ಆಟೋದಲ್ಲಿ ಹೋಗುತ್ತಿದ್ದಾಗ  ಸ್ಫೋಟ ಸಂಭವಿಸಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ಆಟೋದಲ್ಲಿ ಸುಟ್ಟುಹೋಗಿದ್ದ ಪ್ರೆಶರ್ ಕುಕ್ಕರ್ ಪತ್ತೆಯಾಯಿತು. ಅದರೊಳಗೆ ಡಿಟೋನೇಟರ್, ಸರ್ಕ್ಯೂಟ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆತ್ಮಾಹುತಿ ಬಾಂಬ್ ಇದ್ದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಶಾರಿಕ್ ತನ್ನ ಬಳಿ ಹುಬ್ಬಳ್ಳಿಯ ‘ಪ್ರೇಮರಾಜ’ ಎಂಬವರ ಹೆಸರಿನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದ, ಶಾರಿಕ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿ  ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ತಂದಿರಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.
ಸ್ಫೋಟದ ಮರುದಿನವೇ ಮೈಸೂರಿನಲ್ಲಿದ್ದ ಶಾರಿಕ್ ಬಾಡಿಗೆ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ ವಸ್ತುಗಳನ್ನು ವಿಧಿವಿಜ್ಞಾನ ತಂಡ ವಶಪಡಿಸಿಕೊಂಡಿತ್ತು. ಇದರೊಂದಿಗೆ ಒಂದು ಮೊಬೈಲ್ ಫೋನ್, ಎರಡು ನಕಲಿ ಆಧಾರ್ ಕಾರ್ಡ್‌ಗಳು, ಒಂದು ನಕಲಿ ಪಾನ್ ಕಾರ್ಡ್ ಮತ್ತು ಫಿನೋ (FINO) ಡೆಬಿಟ್ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿತ್ತು.
ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ನವೆಂಬರ್ 25, 2022 ರಂದು ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು. ಅಂತಿಮವಾಗಿ 2023 ರ ನವೆಂಬರ್‌ನಲ್ಲಿ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿತು. ಆನ್‌ಲೈನ್ ಹ್ಯಾಂಡ್ಲರ್ ಒಬ್ಬನ ಸೂಚನೆಯಂತೆ, ಭಾರತದಲ್ಲಿ ‘ಖಿಲಾಫತ್’ (ಶರಿಯಾ ಕಾನೂನು) ಸ್ಥಾಪಿಸುವ ಉದ್ದೇಶದಿಂದ ಈ ಸ್ಫೋಟದ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement