ಆನ್‌ಲೈನ್ ಗೇಮಿಂಗ್‌ಗೆ ಲಗಾಮು: ಮೇ 1 ರಿಂದ ದೇಶಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿ

ನವದೆಹಲಿ: ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರವು, ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ-2025’ (Promotion and Regulation of Online Gaming Act, 2025)ರ ಅಡಿಯಲ್ಲಿ ಸಿದ್ಧಪಡಿಸಲಾದ ಹೊಸ ನಿಯಮಾವಳಿಗಳನ್ನು ಮೇ 1, 2026 ರಿಂದ ಜಾರಿಗೆ ತಂದಿದೆ. ಈ ಮೂಲಕ ಹಾನಿಕಾರಕ ಆನ್‌ಲೈನ್ ಜೂಜಾಟಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ಇ-ಸ್ಪೋರ್ಟ್ಸ್ ಮತ್ತು ಸುರಕ್ಷಿತ ಡಿಜಿಟಲ್ ಮನರಂಜನೆಗೆ ಹೊಸ ಬಲ ನೀಡಲು ಸರ್ಕಾರ ನಿರ್ಧರಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಧಿಸೂಚಿಸಿರುವ ಈ ಹೊಸ ನಿಯಮಗಳ ಪ್ರಕಾರ, ‘ಆನ್‌ಲೈನ್ ಗೇಮಿಂಗ್ ಅಥಾರಿಟಿ ಆಫ್ ಇಂಡಿಯಾ’ ಎಂಬ ಪ್ರಬಲ ಕೇಂದ್ರೀಯ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ.

ಈ ಪ್ರಾಧಿಕಾರವು ದೇಶದ ಎಲ್ಲಾ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ವರ್ಗೀಕರಿಸುವ, ದೂರುಗಳನ್ನು ಸ್ವೀಕರಿಸುವ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತದೆ. ವಿಶೇಷವಾಗಿ ಒಂದು ಆಟವು ಕೇವಲ ಮನರಂಜನೆಯ ಇ-ಸ್ಪೋರ್ಟ್ಸ್ ಅಥವಾ ಹಣ ಗೆಲ್ಲುವ ಜೂಜಾಟವೇ ಎಂಬುದನ್ನು ಅದರ ಪ್ರವೇಶ ಶುಲ್ಕ ಮತ್ತು ಬಹುಮಾನದ ಹಣದ ಆಧಾರದ ಮೇಲೆ ಈ ಪ್ರಾಧಿಕಾರವೇ ನಿರ್ಧರಿಸಲಿದ್ದು, ಪ್ರತಿ ಪ್ರಕರಣವನ್ನು 90 ದಿನಗಳ ಒಳಗೆ ಇತ್ಯರ್ಥಪಡಿಸಲಿದೆ.
ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಈ ಕಾಯ್ದೆಯು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಒಳಗೊಂಡಿದೆ. ನೋಂದಾಯಿತ ಗೇಮಿಂಗ್ ಕಂಪನಿಗಳು ಇನ್ಮುಂದೆ ಕಡ್ಡಾಯವಾಗಿ ವಯಸ್ಸಿನ ದೃಢೀಕರಣ, ಪೋಷಕರ ನಿಯಂತ್ರಣ ವ್ಯವಸ್ಥೆ ಮತ್ತು ಆಟ ಆಡುವ ಸಮಯಕ್ಕೆ ಮಿತಿಯನ್ನು ಹೇರಬೇಕಾಗುತ್ತದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಅಲ್ಲದೆ, ಬಳಕೆದಾರರ ದೂರುಗಳ ಪರಿಹಾರಕ್ಕಾಗಿ ಎರಡು ಹಂತದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಪ್ಲಾಟ್‌ಫಾರ್ಮ್‌ ನೀಡುವ ಪರಿಹಾರ ತೃಪ್ತಿಕರವಾಗಿಲ್ಲದಿದ್ದರೆ ಬಳಕೆದಾರರು ನೇರವಾಗಿ ಪ್ರಾಧಿಕಾರ ಅಥವಾ ಐಟಿ ಸಚಿವಾಲಯದ ಕಾರ್ಯದರ್ಶಿಯನ್ನೇ ಸಂಪರ್ಕಿಸಬಹುದಾಗಿದೆ.
ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಈ ಕ್ರಮವು, ಭಾರತವನ್ನು ಜಾಗತಿಕ ಗೇಮಿಂಗ್ ಹಬ್ ಆಗಿ ರೂಪಿಸುವ ಗುರಿ ಹೊಂದಿದೆ. ತಾಂತ್ರಿಕ ನಾವೀನ್ಯತೆಗಳಿಗೆ ಅವಕಾಶ ನೀಡುತ್ತಲೇ, ಸಮಾಜದಲ್ಲಿ ಆನ್‌ಲೈನ್ ಆಟಗಳಿಂದ ಉಂಟಾಗುವ ಆರ್ಥಿಕ ಮತ್ತು ಸಾಮಾಜಿಕ ಅಪಾಯಗಳನ್ನು ತಡೆಯುವುದು ಈ ಕಾನೂನಿನ ಅಂತಿಮ ಉದ್ದೇಶವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement