ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಿ ಕರ್ನಾಟಕ ವಿಧಾನಸಭೆ ಶನಿವಾರ (ಮೇ 2) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ದಿನಾಂಕವಾದ ಏಪ್ರಿಲ್ 15, 2026 ರಿಂದಲೇ ಜಾರಿಗೆ ಬರುವಂತೆ ವಿನಯ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಶಿಕ್ಷೆಯ ಅವಧಿ ಪೂರ್ಣಗೊಂಡು ಜೈಲಿನಿಂದ ಬಿಡುಗಡೆಯಾದ ನಂತರದ ಆರು ವರ್ಷಗಳ ಕಾಲ ವಿನಯ ಕುಲಕರ್ಣಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಮೇಲ್ಮನವಿ ನ್ಯಾಯಾಲಯವು ಈ ಶಿಕ್ಷೆಗೆ ತಡೆ ನೀಡಿದರೆ ಮಾತ್ರ ಈ ಆದೇಶ ಬದಲಾಗಬಹುದು.
ಭಾರತೀಯ ಸಂವಿಧಾನದ ವಿಧಿ 191(1)(ಇ) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ತೀರ್ಪು
2016ರ ಜೂನ್ 15ರಂದು ಧಾರವಾಡದ ಜಿಮ್‌ವೊಂದರಲ್ಲಿ ಬಿಜೆಪಿ ಮುಖಂಡ ಯೋಗೇಶ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ 15ನೇ ಆರೋಪಿಯಾಗಿದ್ದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಿತ್ತು. ತನಿಖೆಯ ನಂತರ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಪ್ರಿಲ್ 15ರಂದು ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ವಿನಯ ಕುಲಕರ್ಣಿ ಅನರ್ಹತೆಯಿಂದಾಗಿ ಧಾರವಾಡ ವಿಧಾನಸಭಾ ಕ್ಷೇತ್ರ ಅಧಿಕೃತವಾಗಿ ತೆರವಾಗಿದ್ದು, ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಒಂದು ಸ್ಥಾನ ಕಡಿಮೆಯಾದಂತಾಗಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ