ನವದೆಹಲಿ: ದೆಹಲಿಯ ವಿವೇಕ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಇಂದು ಭಾನುವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದು ವರ್ಷದ ಮಗುವೂ ಸೇರಿದಂತೆ ಒಂಬತ್ತು ಮಂದಿಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯನ್ನು ನಂದಿಸಲು ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ತಕ್ಷಣವೇ 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಬೆಂಕಿ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗಳಿಗೂ ಹರಡಿತ್ತು. ವಿವೇಕ ವಿಹಾರ್ ಪೂರ್ವ ದೆಹಲಿಯ ಪ್ರಮುಖ ಪ್ರದೇಶವಾಗಿದೆ. ಡಜನ್ಗಿಂತಲೂ ಹೆಚ್ಚು ಜನರನ್ನು ಕಟ್ಟಡದಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ರವಾನಿಸಲಾಗಿದೆ.ಮೃತರಾಗಿರುವ ಒಂಬತ್ತು ಜನರ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ಹೆಚ್ಚು ಸಾವುನೋವುಗಳು ಎರಡನೇ ಮಹಡಿಯಲ್ಲಿ ವರದಿಯಾಗಿದ್ದು, ಅಲ್ಲಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಅರವಿಂದ ಜೈನ್ (60 ವರ್ಷ), ಅವರ ಪತ್ನಿ ಅನಿತಾ ಜೈನ್ (58 ವರ್ಷ), ಅರವಿಂದ ಅವರ ಮಗ ನಿಶಾಂತ ಜೈನ್ (35 ವರ್ಷ), ನಿಶಾಂತ ಪತ್ನಿ ಅಂಚಲ್ ಜೈನ್ (33 ವರ್ಷ), ದಂಪತಿ ಮಗ ಆಕಾಶ ಜೈನ್ (1.5 ವರ್ಷ), ಮೂರನೇ ಮಹಡಿಯಲ್ಲಿದ್ದ ನಿಶಾಂತ ಜೈನ್ (50 ವರ್ಷ), ಅವರ ಪತ್ನಿ ಶೈಲಿ ಜೈನ್ (48 ವರ್ಷ), ಅವರ ಮಗ ಸಮ್ಯಕ್ ಜೈನ್ (25 ವರ್ಷ), ಮೊದಲನೇ ಮಹಡಿಯಲ್ಲಿ ಶಿಖಾ ಜೈನ್ (40 ವರ್ಷ) ಮೃತಪಟ್ಟಿದ್ದು, ಅವರ ಪತಿ ನವೀನ ಜೈನ್ (48 ವರ್ಷ) ಗಾಯಗೊಂಡು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿಶಾಮಕದವರು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಳಿಗ್ಗೆ 6 ಗಂಟೆಯ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು.ಘಟನಾ ಸ್ಥಳದ ದೃಶ್ಯಗಳಲ್ಲಿ ಕಟ್ಟಡದ ಹಲವು ಭಾಗಗಳು ಸುಟ್ಟುಹೋಗಿರುವುದು ಮತ್ತು ಮೇಲಿನ ಮಹಡಿಯಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ.
“ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಬೆಂಕಿಯ ಕುರಿತು ಕರೆ ಬಂದಿತು. ತಕ್ಷಣವೇ ಅಗ್ನಿಶಾಮಕ ವಾಹನಗಳು ಮತ್ತು ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಕಿಯನ್ನು ಹತೋಟಿಗೆ ತರಲು ಸುಮಾರು ಎರಡು ಗಂಟೆಗಳು ಬೇಕಾಯಿತು, ನಂತರ ಶೋಧ ಕಾರ್ಯ ನಡೆಸಲಾಯಿತು” ಎಂದು ಷಹದರಾ ಡಿಸಿಪಿ ರಾಜೇಂದ್ರ ಪ್ರಸಾದ ಮೀನಾ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅವರು ಎಲ್ಲಾ ಮೃತದೇಹಗಳನ್ನು ಹೊರತೆಗೆದು ದೆಹಲಿ ಪೊಲೀಸ್ ಅಪರಾಧ ವಿಭಾಗದ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಅವಘಡಕ್ಕೆ ಕಾರಣವೇನು..? :
ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಎಸಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. “ಎಸಿಯಲ್ಲಿನ ಸ್ಫೋಟವು ಬೆಂಕಿಗೆ ಕಾರಣವಾಯಿತು. ಸುಮಾರು 12 ರಿಂದ 15 ಜನರನ್ನು ರಕ್ಷಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ