ಕಾರವಾರ : ಮುಂಜಾನೆ ಶೌಚಕ್ಕೆಂದು ಹೊರಬಂದ ವೃದ್ಧೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ
ಪಣಸೋಲಿ ವಲಯದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. 70 ವರ್ಷದ ವೃದ್ಧೆ ಸುಶೀಲಾ ದೇಸಾಯಿ ಪ್ರತಿರೋಧ ತೋರಿ ಪಾರಾಗಿ ಬಂದಿದ್ದಾರೆ ಎಂದು ಹೇಳಲಾಗಿದೆ. ಪಣಸೋಲಿ ವಲಯದ ಅವುರ್ಲಿ ದಾಬೆ ಗ್ರಾಮದ ನಿವಾಸಿ ಸುಶೀಲಾ ದೇಸಾಯಿ (70) ಸೋಮವಾರ ಬೆಳಗಿನ ಜಾವ ಮೂತ್ರ ವಿಸರ್ಜನೆಗಾಗಿ ಮನೆ ಬಾಗಿಲು ತೆಗೆದು ಹೊರಬಂದಿದ್ದಾರೆ. ಈ ವೇಳೆ ಮನೆಯ ಅಂಚಿನ ಪೊದೆಯಲ್ಲಿದ್ದ ಚಿರತೆ ಸುಶೀಲಾ ಅವರ ಮೇಲೆ ದಾಳಿ ಮಾಡಿದೆ. ಅನಿರೀಕ್ಷಿತ ದಾಳಿಯಿಂದ ಕಂಗಾಲಾದರೂ ಧೈರ್ಯಗುಂದದ ವೃದ್ಧೆ ಚಿರತೆಯನ್ನು ದೂರ ತಳ್ಳಲು ಪ್ರಯತ್ನಿಸಿ ಜೋರಾಗಿ ಕಿರುಚಾಡಿದ್ದಾರೆ. ಅಜ್ಜಿಯ ಕೂಗು ಮತ್ತು ಪ್ರತಿರೋಧಕ್ಕೆ ಹೆದರಿದ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಚಿರತೆಯ ಉಗುರುಗಳಿಂದ ಅವರ ತಲೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಗಾಯಗೊಂಡು ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ