ನವದೆಹಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆಗೆ ಸೂಚಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಅಂಚೆ ಮತಪತ್ರಗಳ ಮರುಪರಿಶೀಲನೆ ಮತ್ತು ಮರುಎಣಿಕೆಗೆ ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್‌ನ ಏಪ್ರಿಲ್ 6 ರ ಆದೇಶವನ್ನು ರಾಜೇಗೌಡ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಮೂರು ವರ್ಷಗಳ ಕಾಲ ಶೃಂಗೇರಿ ಶಾಸಕರಾಗಿದ್ದ ರಾಜೇಗೌಡ ಅಂಚೆ ಮತಗಳ ಮರು ಎಣಿಕೆಯ ನಂತರ ಬಿಜೆಪಿಯ ಡಿ ಎನ್ ಜೀವರಾಜ ಅವರ ವಿರುದ್ಧ ಪರಾಭವಗೊಂಡಿದ್ದರು.
ಹಿರಿಯ ವಕೀಲ ದೇವದತ್ ಕಾಮತ್ ಅವರು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತಮತ್ತು ನ್ಯಾಯಮೂರ್ತಿ ಜೋಯಮಲ್ಯ ಬಾಗ್ಚಿ ಅವರ ವಿಭಾಗೀಯ ಪೀಠದ ಮುಂದೆ ಅರ್ಜಿಯ ಬಗ್ಗೆ ಉಲ್ಲೇಖಿಸಿದ್ದು, ಪೀಠವು ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಗೌಡರು 201 ಮತಗಳಿಂದ ಜೀವರಾಜ ವಿರುದ್ಧ ಜಯ ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿಯ ಶಾಸಕ ಜೀವರಾಜ್ ಅವರು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಕಾಂಗ್ರೆಸ್ ಏಜೆಂಟ್ ಸುಧೀರಕುಮಾರ ಮುರೋಳ್ಳಿ ಅವರು ನೀಡಿದ ದೂರಿನ ಅನ್ವಯ ಮತ ಪತ್ರ ತಿರುಚಿದ ಆರೋಪದ ಸಂಬಂಧ ಜೀವರಾಜ, ಅಂದಿನ ಜಿಲ್ಲಾಧಿಕಾರಿ ಕೆ ಎನ್ ರಮೇಶ ಮತ್ತು ಅಂದಿನ ಚುನಾವಣಾಧಿಕಾರಿ ಟಿ ಆರ್ ವೇದಮೂರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ