ಕೋಲ್ಕತ್ತಾ: ದಶಕಗಳ ಕಾಲ ಮಮತಾ ಬ್ಯಾನರ್ಜಿಯವರ ಅತ್ಯಂತ ಆಪ್ತ ಹೋರಾಟಗಾರನಾಗಿ, ಎಡಪಂಥೀಯರ ವಿರುದ್ಧ ಬೀದಿಗಿಳಿದು ಹೋರಾಡಿದ್ದ ಸುವೇಂದು ಅಧಿಕಾರಿ, ಈಗ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಉದಯದ ಮಹಾ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೇ ೯ರಂದು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಳ್ಳಲಿದ್ದು, ಇದು ರಾಜ್ಯದ ಅವರ ರಾಜಕೀಯ ಪಯಣದಲ್ಲಿ ಅತಿದೊಡ್ಡ ಮೈಲಿಗಲ್ಲಾಗಿದೆ.
ಶುಕ್ರವಾರ ಕೋಲ್ಕತ್ತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ 57 ವರ್ಷದ ಸುವೇಂದು ಅವರನ್ನು ಶಾಸಕ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮಮತಾ ಬ್ಯಾನರ್ಜಿಯನ್ನು ಎರಡು ಬಾರಿ ಮಣಿಸಿದ ‘ಜೈಂಟ್ ಕಿಲ್ಲರ್’
ಸುವೇಂದು ಅಧಿಕಾರಿ ಅವರ ಮುಖ್ಯಮಂತ್ರಿ ಪಟ್ಟಕ್ಕೆ ಅತಿದೊಡ್ಡ ಅರ್ಹತೆ ಎಂದರೆ ಮಮತಾ ಬ್ಯಾನರ್ಜಿಯವರನ್ನು ಅವರದ್ದೇ ಭದ್ರಕೋಟೆಗಳಲ್ಲಿ ಸೋಲಿಸಿದ್ದು. 2026ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಅವರ ಅತ್ಯಂತ ಸುರಕ್ಷಿತ ಕ್ಷೇತ್ರ ಎನ್ನಲಾಗಿದ್ದ ಭವಾನಿಪುರದಲ್ಲಿ ಸುವೇಂದು 15,105 ಮತಗಳ ಅಂತರದಿಂದ ಮಮತಾ ಅವರನ್ನು ಸೋಲಿಸಿ ದೇಶದ ಗಮನ ಸೆಳೆದರು. ತಾವು ಸ್ಪರ್ಧಿಸಿದ್ದ ಎರಡನೇ ಕ್ಷೇತ್ರವಾದ ನಂದಿಗ್ರಾಮದಲ್ಲಿ ಟಿಎಂಸಿ ಅಭ್ಯರ್ಥಿ ಪವಿತ್ರ ಕರ್ ಅವರನ್ನು 9,665 ಮತಗಳ ಅಂತರದಿಂದ ಪರಾಭವಗೊಳಿಸಿದರು. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಮೊದಲ ಬಾರಿ ಸೋಲಿಸಿದ್ದ ಸುವೇಂದು, ಈಗ ಮತ್ತೊಮ್ಮೆ ಭವಾನಿಪುರದಲ್ಲಿ ಸೋಲಿಸುವ ಮೂಲಕ ಟಿಎಂಸಿಯ ಅಜೇಯತ್ವದ ಭ್ರಮೆಯನ್ನು ಸಂಪೂರ್ಣವಾಗಿ ತೊಡೆದುಹಾಕಿದ್ದಾರೆ.
ರಾಜಕೀಯ ಹಿನ್ನೆಲೆ ಮತ್ತು ಕಾಂಗ್ರೆಸ್‌ನಿಂದ ರಾಜಕೀಯ ಪಯಣ
ಸುವೇಂದು ಅಧಿಕಾರಿ ಅವರು ಪೂರ್ವ ಮಿಡ್ನಾಪುರದ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. 1995ರಲ್ಲಿ ಕಾಂಥಿ ಪುರಸಭೆಯ ಕೌನ್ಸಿಲರ್ ಆಗುವ ಮೂಲಕ ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದರು. 1998 ರಲ್ಲಿ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಅನ್ನು ಸ್ಥಾಪಿಸಿದ ನಂತರ ಅಧಿಕಾರಿ ಕುಟುಂಬ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಸೇರಿತು.
ಇವರ ತಂದೆ ಸಿಸಿರ್ ಅಧಿಕಾರಿ ಅವರು ಮೂರು ಬಾರಿ ಸಂಸದರಾಗಿದ್ದವರು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರದಲ್ಲಿ ಅದರ ಭಾಗವಾಗಿದ್ದ ಟಿಎಂಸಿಯಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದವರು. ಸುವೇಂದು ಅವರು ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2009ರಲ್ಲಿ ಸಿಪಿಎಂನ ಪ್ರಭಾವಿ ನಾಯಕ ಲಕ್ಷ್ಮಣ ಸೇಠ್ ಅವರನ್ನು 1.73 ಲಕ್ಷ ಮತಗಳ ಅಂತರದಿಂದ ಸೋಲಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದರು.
ನಂದಿಗ್ರಾಮ ಹೋರಾಟ ಮತ್ತು ಟಿಎಂಸಿಯಿಂದ ನಿರ್ಗಮನ
2007ರ ನಂದಿಗ್ರಾಮದ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಸುವೇಂದು ಮುಂಚೂಣಿ ನಾಯಕರಾಗಿದ್ದರು. ಇದು ಬಂಗಾಳದಲ್ಲಿ ಎಡರಂಗದ 34 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಲು ಅಡಿಪಾಯ ಹಾಕಿಕೊಟ್ಟಿತು. 2016ರಲ್ಲಿ ನಂದಿಗ್ರಾಮದಿಂದ ಶಾಸಕರಾಗಿ ಆಯ್ಕೆಯಾದ ಮಮತಾ ನೇತೃತ್ವದ ಟಿಎಂಸಿ ಸರ್ಕಾರದಲ್ಲಿ ಸಾರಿಗೆ ಮತ್ತು ನೀರಾವರಿ ಸಚಿವರಾದರು.
ಆದರೆ, ಟಿಎಂಸಿ ಪಕ್ಷದಲ್ಲಿ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪ್ರಾಬಲ್ಯ ಹೆಚ್ಚಾದಾಗ ಅಸಮಾಧಾನಗೊಂಡ ಸುವೇಂದು, 2020ರ ನವೆಂಬರ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಸೆಂಬರ್‌ನಲ್ಲಿ ಬಿಜೆಪಿ ಸೇರಿದರು.
2021 ರ ಚುನಾವಣೆಗೆ ಮುನ್ನ ಆಡಳಿತಾರೂಢ ಟಿಎಂಸಿಗೆ ದೊಡ್ಡ ಹಿನ್ನಡೆಯಾಯಿತು. ಅವರ ಬದಲಾವಣೆಯು ಬಂಗಾಳದ ರಾಜಕೀಯ ಭೂದೃಶ್ಯವನ್ನು ನಾಟಕೀಯವಾಗಿ ಬದಲಾಯಿಸಿತು.
2021 ರಲ್ಲಿ ಬಿಜೆಪಿ ಸರ್ಕಾರ ರಚಿಸಲು ವಿಫಲವಾದರೂ 77 ಸ್ಥಾನಗಳನ್ನು ಗೆದ್ದು ಬಂಗಾಳದಲ್ಲಿ ಟಿಎಂಸಿ ನಂತರದಲ್ಲಿ ಬಲಾಢ್ಯಪಕ್ಷವಾಗಿ ಹೊರಹೊಮ್ಮಿತು. ಸುವೇಂದು ಅಧಿಕಾರಿ ವಿಪಕ್ಷದ ನಾಯಕರಾದರು ಮತ್ತು ವಿಧಾನಸಭೆಯ ಒಳಗೆ ಮತ್ತು ಹೊರಗೆ ಮಮತಾ ಸರ್ಕಾರದ ವಿರುದ್ಧ ಪಕ್ಷದ ಅತ್ಯಂತ ಆಕ್ರಮಣಕಾರಿ ಧ್ವನಿಯಾದರು.
ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲು ಕಾರಣಗಳೇನು..?
ದಶಕಗಳಿಂದ ಬಂಗಾಳದ ರಾಜಕೀಯವನ್ನು ‘ಭದ್ರಲೋಕ’ (ಮೇಲ್ಜಾತಿ) ನಾಯಕರು ಆಡಳಿತದ ಮುಂಚೂಣಿಯಲ್ಲಿದ್ದರು. ಆದರೆ ಸುಮಾರು 10%ರಷ್ಟು ಜನಸಂಖ್ಯೆ ಇರುವ ಮಹಿಷ್ಯ (OBC) ಸಮುದಾಯದ ಸುವೇಂದು ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ದೊಡ್ಡ ಬದಲಾವಣೆಯ ಹಾಗೂ ತಂತ್ರಗಾರಿಕೆಯ ಹೆಜ್ಜೆ ಇರಿಸಿದೆ.
ಸಂಘಟನಾ ಶಕ್ತಿ:
ಸುವೆಂದು ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆಆಯ್ಕೆ ಮಾಡಲು ಕೇವಲ ಇಂದೊಂದೇ ಅಂಶ ಕಾರಣವಲ್ಲ. ಟಿಎಂಸಿಯ ಬೂತ್ ಮಟ್ಟದ ಸಂಪರ್ಕ ವ್ಯವಸ್ಥೆಯನ್ನು ಎದುರಿಸಲು ಸುವೇಂದು ತಮ್ಮದೇ ಆದ ಕಾರ್ಯಕರ್ತರ ಜಾಲವನ್ನು ಹೊಂದಿದ್ದಾರೆ. ಟಿಎಂಸಿಯ ಒಳಗುಟ್ಟುಗಳನ್ನು ಬಲ್ಲ ಇವರು ಬಿಜೆಪಿಗೆ ‘ಕಾಂಬ್ಯಾಟ್ ಕಮಾಂಡರ್’ ಆಗಿ ಕೆಲಸ ಮಾಡಿದರು.ಮಾಲ್ಡಾ ಮತ್ತು ಮುರ್ಶಿದಾಬಾದ್‌ನಂತಹ ಅಲ್ಪಸಂಖ್ಯಾತ ಪ್ರಭಾವಿತ ಪ್ರದೇಶಗಳಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸುವಲ್ಲಿ ಇವರ ಪಾತ್ರ ದೊಡ್ಡದು ಎಂದೇ ಹೇಳಬಹುದು. ಮಾಲ್ಡಾ ಮತ್ತು ಮುರ್ಷಿದಾಬಾದ್‌ನಲ್ಲಿ, ಬಿಜೆಪಿ ತನ್ನ ಸ್ಥಾನಗಳನ್ನು ದ್ವಿಗುಣಗೊಳಿಸಿಕೊಂಡಿದೆ. ಅಧಿಕಾರಿ ಈ ಕಾರ್ಯತಂತ್ರದ ಶಿಲ್ಪಿಯಾಗಿದ್ದು, ಚುನಾವಣೆಯನ್ನು “ಬಂಗಾಳಿ ಹಿಂದೂ ಐಡೆಂಟಿಟಿʼಯನ್ನು” ರಕ್ಷಿಸುವ ಹೋರಾಟವನ್ನಾಗಿ ರೂಪಿಸಿದರು. “ಮಾಸ್ ಲೀಡರ್” ಎಂಬ ಗುರುತನ್ನು ಉಳಿಸಿಕೊಂಡು ಆರ್‌ಎಸ್‌ಎಸ್‌ನ ಭಾಷೆಯನ್ನು ಮಾತನಾಡುವ ಅವರ ಸಾಮರ್ಥ್ಯವು ಚುನಾವಣಾ ನಂತರದ ಯುಗದಲ್ಲಿ ಈ ಕ್ರೋಢೀಕರಣವನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ಹಾಗೂಪಕ್ಷದಲ್ಲಿ ಅವರ ಬಲವನ್ನು ಇನ್ನಷ್ಟು ಹೆಚ್ಚಿಸಿತು.
ನೇತಾಜಿ ಸುಭಾಷ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿರುವ ಇವರು ಇನ್ನೂ ಅವಿವಾಹಿತರಾಗಿದ್ದಾರೆ. 2014ರಲ್ಲಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸಿದ್ದರೂ, ರಾಜಕೀಯವಾಗಿ ಇವರು ಎಂದೂ ಕುಗ್ಗಲಿಲ್ಲ.
ಯಾವ ನಾಯಕಿಯನ್ನು ಅಧಿಕಾರಕ್ಕೆ ತರಲು ಸುವೇಂದು ಹೋರಾಡಿದ್ದರೋ, ಈಗ ಅವರನ್ನೇ ಮಣಿಸಿ ಬಂಗಾಳದ ಸಾರಥ್ಯ ವಹಿಸಿಕೊಳ್ಳುತ್ತಿರುವುದು ಒಂದು ದೊಡ್ಡ ರಾಜಕೀಯ ಪವಾಡ. ಈಗ ಸುವೇಂದು ಅಧಿಕಾರಿ ಅವರ ಮುಂದಿನ ಆಡಳಿತದ ಮೇಲೆ ದೇಶದ ಗಮನವಿದೆ.


ನಿಮ್ಮ ಕಾಮೆಂಟ್ ಬರೆಯಿರಿ