ನವದೆಹಲಿ: ಕರ್ನಾಟಕದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮರು ಎಣಿಕೆಯ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಹಾಗೂ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನವನ್ನು ಮರುಸ್ಥಾಪಿಸಲು ಸೂಚಿಸಿದೆ.
2023ರ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜಅವರು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟದ ಫಲವಾಗಿ, ಏಪ್ರಿಲ್ 2026ರಲ್ಲಿ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಈ ಆದೇಶದನ್ವಯ ಮೇ 2, 2026 ರಂದು ಮರು ಎಣಿಕೆ ನಡೆದಿದ್ದು, ಮೇ 3 ರಂದು ಜೀವರಾಜ ಅವರು 52 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಘೋಷಿಸಲಾಗಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕೇವಲ ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳ ಮರುಪರಿಶೀಲನೆಗೆ ಮಾತ್ರ ಆದೇಶಿಸಿತ್ತು. ಆದರೆ, ಚುನಾವಣಾಧಿಕಾರಿಗಳು ಈ ವ್ಯಾಪ್ತಿಯನ್ನು ಮೀರಿ, ಈಗಾಗಲೇ ಮಾನ್ಯತೆ ಪಡೆದಿದ್ದ ರಾಜೇಗೌಡ ಪರವಾದ 562 ಅಂಚೆ ಮತಗಳನ್ನೂ ಮರು ಎಣಿಕೆ ಮಾಡಿದ್ದಾರೆ ಎಂದು ಅವರು ವಾದಿಸಿದ್ದರು.
ನ್ಯಾಯಮೂರ್ತಿಗಳಾದ ಸಂಜಯಕುಮಾರ ಮತ್ತು ಕೆ. ವಿನೋದ ಚಂದ್ರನ್ ಅವರಿದ್ದ ಪೀಠವು ಈ ವಾದವನ್ನು ಪುರಸ್ಕರಿಸಿತು.
ಮರು ಎಣಿಕೆಯ ನಂತರ ನಡೆದ ಬೆಳವಣಿಗೆಗಳು ಕೇವಲ ಮುಗಿದ ಅಧ್ಯಾಯ (Fait accompli) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂಜಯಕುಮಾರ ಅವರು ಜೀವರಾಜ್ ಪರ ವಕೀಲರ ವಾದವನ್ನು ತಳ್ಳಿಹಾಕಿದರು.
ನ್ಯಾಯಾಲಯವು ಮರು ಎಣಿಕೆಗಿಂತ ಮೊದಲು ಇದ್ದ ಸ್ಥಿತಿಯನ್ನೇ (Status quo ante) ಮುಂದುವರಿಸಲು ಆದೇಶಿಸಿದೆ. ಅಂದರೆ ಜೀವರಾಜ ಅವರ ಇತ್ತೀಚಿನ ವಿಜಯದ ಘೋಷಣೆ ಮತ್ತು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿರುವುದು ಅಮಾನತ್ತಿನಲ್ಲಿರುತ್ತದೆ. ಮೂಲತಃ ಜಯಗಳಿಸಿದ್ದ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನವು ಪುನಃ ಸ್ಥಾಪನೆಯಾಗಲಿದೆ.
ರಾಜೇಗೌಡರ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್, ಮುಕುಲ್ ರೋಹಟಗಿ, ದೇವದತ್ ಕಾಮತ್ ಮತ್ತು ಅಡ್ವೋಕೇಟ್ ಆನ್ ರೆಕಾರ್ಡ್ ತುಷಾರ್ ಗಿರಿ ವಾದ ಮಂಡಿಸಿದರು. ಜೀವರಾಜ ಪರವಾಗಿ ಹಿರಿಯ ವಕೀಲ ವಿ. ಗಿರಿ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 21ಕ್ಕೆ ನಿಗದಿಪಡಿಸಿದೆ. ಅಲ್ಲಿಯವರೆಗೆ ಹೈಕೋರ್ಟ್ ಆದೇಶದ ನಂತರ ನಡೆದ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ.


ನಿಮ್ಮ ಕಾಮೆಂಟ್ ಬರೆಯಿರಿ