ಬರ್ಮುಡಾ ಟ್ರಯಾಂಗಲ್ ರಹಸ್ಯ ಭೇದಿಸಿದ ವಿಜ್ಞಾನಿಗಳು : ದ್ವೀಪದ ತಳಭಾಗದಲ್ಲಿದೆ ಬೆರಗಾಗುವ ಭೌಗೋಳಿಕ ವಿಸ್ಮಯ !

ವಾಷಿಂಗ್ಟನ್: ಕೆಲ ದಶಕಗಳಿಂದ ಭೂವಿಜ್ಞಾನಿಗಳನ್ನು ಕಾಡುತ್ತಿದ್ದ ಅಟ್ಲಾಂಟಿಕ್ ಸಾಗರದ ಅತಿದೊಡ್ಡ ನಿಗೂಢ ಪ್ರಶ್ನೆಯೊಂದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. 3 ಕೋಟಿ ವರ್ಷಗಳ ಹಿಂದೆಯೇ ಜ್ವಾಲಾಮುಖಿಗಳು ಶಾಂತವಾಗಿದ್ದರೂ ಸಹ, ಬರ್ಮುಡಾ ದ್ವೀಪವು ಸಮುದ್ರದ ತಳಕ್ಕಿಂತ ಇಷ್ಟು ಎತ್ತರದಲ್ಲಿ ಹೇಗೆ ಸ್ಥಿರವಾಗಿ ನಿಂತಿದೆ ಎಂಬ ಕುತೂಹಲಕ್ಕೆ ಅಮೆರಿಕದ ವಿಜ್ಞಾನಿಗಳ ತಂಡ ಈಗ ಉತ್ತರ ಕಂಡುಕೊಂಡಿದೆ.
ಸಾಮಾನ್ಯವಾಗಿ ಹವಾಯಿಯಂತಹ ದ್ವೀಪಗಳು ‘ಮ್ಯಾಂಟಲ್ ಪ್ಲೂಮ್’ (Mantle Plume) ಎಂಬ ಪ್ರಕ್ರಿಯೆಯಿಂದ ರೂಪುಗೊಳ್ಳುತ್ತವೆ. ಅಂದರೆ, ಭೂಮಿಯ ಆಳದಿಂದ ಬಿಸಿಬಿಸಿಯಾದ ಬಂಡೆಗಳು ಮೇಲಕ್ಕೆ ಚಿಮ್ಮಿದಾಗ ಜ್ವಾಲಾಮುಖಿಗಳು ಉಂಟಾಗಿ ಸಮುದ್ರದ ತಳ ಉಬ್ಬಿಕೊಳ್ಳುತ್ತದೆ. ಕಾಲಾನಂತರದಲ್ಲಿ ಜ್ವಾಲಾಮುಖಿ ಚಟುವಟಿಕೆ ನಿಂತುಹೋದಂತೆ ಈ ದ್ವೀಪಗಳು ಸಮುದ್ರದ ಆಳಕ್ಕೆ ಕುಸಿಯುತ್ತವೆ. ಆದರೆ ಬರ್ಮುಡಾ ವಿಷಯದಲ್ಲಿ ಹೀಗಾಗಲಿಲ್ಲ. ಇದು ಇಂದಿಗೂ ಸಮುದ್ರದ ತಳಕ್ಕಿಂತ ಸುಮಾರು 1,600 ಅಡಿಗಳಷ್ಟು ಎತ್ತರದಲ್ಲೇ ಸ್ಥಿರವಾಗಿದೆ.

ಸಂಶೋಧನೆಯಲ್ಲಿ ಪತ್ತೆಯಾದ ‘ಬಂಡೆಗಳ ತೇಲು ಸೇತುವೆ’
ಕಾರ್ನೆಗಿ ಸೈನ್ಸ್‌ನ ಭೂಕಂಪಶಾಸ್ತ್ರಜ್ಞ ವಿಲಿಯಂ ಫ್ರೇಜರ್ ಮತ್ತು ಯೇಲ್ ವಿಶ್ವವಿದ್ಯಾಲಯದ ಜೆಫ್ರಿ ಪಾರ್ಕ್ ನೇತೃತ್ವದ ತಂಡವು ಈ ರಹಸ್ಯವನ್ನು ಭೇದಿಸಿದೆ. ಅವರು ಭೂಕಂಪದ ಅಲೆಗಳನ್ನು (Seismic Waves) ಬಳಸಿಕೊಂಡು ಭೂಮಿಯ ಒಳಗಿನ ಸುಮಾರು 20 ಮೈಲಿ ಆಳದ ಚಿತ್ರಣವನ್ನು ವಿಶ್ಲೇಷಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಬರ್ಮುಡಾ ದ್ವೀಪದ ಕೆಳಗೆ ಸುಮಾರು 12 ಮೈಲಿ ದಪ್ಪದ ಬಂಡೆಗಳ ಪದರವಿದೆ. ಈ ಬಂಡೆಗಳು ಸಾಮಾನ್ಯ ಭೂಮಿಯ ಪದರಕ್ಕಿಂತ ಕಡಿಮೆ ಸಾಂದ್ರತೆಯನ್ನು ಹೊಂದಿವೆ. ಈದಪ್ಪನಾದ ಬಂಡೆಯ ಪದರವು (Underplating) ಭೂಮಿಯ ಒಳಗಿನಿಂದ ದ್ವೀಪವನ್ನು ತಳ್ಳುವ ಬದಲು, ಒಂದು ‘ತೆಪ್ಪದ’ (Raft) ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅಂದರೆ, ಈ ಹಗುರವಾದ ಬಂಡೆಗಳು ಇಡೀ ದ್ವೀಪವನ್ನು ಸಮುದ್ರದ ಮೇಲೆ ತೇಲುವಂತೆ ಹಿಡಿದಿಟ್ಟುಕೊಂಡಿವೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ವಿಜ್ಞಾನಿಗಳ ಪ್ರಕಾರ, ಲಕ್ಷಾಂತರ ವರ್ಷಗಳ ಹಿಂದೆ ಕಾರ್ಬನ್ ಅಂಶದಿಂದ ಕೂಡಿದ ಕರಗಿದ ಬಂಡೆಗಳು ಭೂಮಿಯ ಹೊರಪದರಕ್ಕೆ ನುಗ್ಗಿ ಅಲ್ಲಿಯೇ ತಣ್ಣಗಾಗಿ ಈ ರಚನೆ ಉಂಟಾಗಿದೆ. ಇದು ನೂರಾರು ಮಿಲಿಯನ್ ವರ್ಷಗಳ ಹಿಂದೆ ‘ಪಾಂಜಿಯಾ’ (Pangea) ಎಂಬ ಮಹಾಖಂಡದ ರಚನೆಯ ಸಮಯದಲ್ಲಿ ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬರ್ಮುಡಾ ಅಧ್ಯಯನಕ್ಕೆ ಅತ್ಯಂತ ಆಕರ್ಷಕ ಸ್ಥಳ. ಏಕೆಂದರೆ ಇಲ್ಲಿನ ಭೌಗೋಳಿಕ ಲಕ್ಷಣಗಳು ಸಾಂಪ್ರದಾಯಿಕ ‘ಮ್ಯಾಂಟಲ್ ಪ್ಲೂಮ್’ ಮಾದರಿಗೆ ಹೊಂದಿಕೆಯಾಗುವುದಿಲ್ಲ. ಇಲ್ಲಿ ನಾವು ಕಂಡುಕೊಂಡಿರುವ ದಪ್ಪನಾದ ಬಂಡೆಯ ಪದರವು (Underplating) ಭೂಮಿಯ ಒಳಗಿನ ಸಂಕೀರ್ಣ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ಮಾಡಿಕೊಟ್ಟಿದೆ ಎಂದು ಸಂಶೋಧಕ ವಿಲಿಯಂ ಫ್ರೇಜರ್ ಹೇಳಿದ್ದಾರೆ.
ಬರ್ಮುಡಾ ದ್ವೀಪವು ಜಗತ್ತಿನಲ್ಲಿ ಇಂತಹ ವಿಶೇಷ ಲಕ್ಷಣ ಹೊಂದಿರುವ ಏಕೈಕ ದ್ವೀಪವೇ ಅಥವಾ ಇಂತಹ ಇನ್ನೂ ಅನೇಕ ದ್ವೀಪಗಳು ಜಗತ್ತಿನಾದ್ಯಂತ ಇವೆಯೇ ಎಂದು ತಿಳಿಯಲು ಫ್ರೇಜರ್ ಅವರು ಈಗ ಸಂಶೋಧನೆ ಮುಂದುವರಿಸಿದ್ದಾರೆ. ಈ ಮಹತ್ವದ ಸಂಶೋಧನೆಯು ‘ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement