ನೀಟ್‌ ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಪುಣೆಯ ಮತ್ತೊಬ್ಬ ಕಿಂಗ್‌ಪಿನ್‌ ಶಿಕ್ಷಕಿ ಸಿಬಿಐ ವಶಕ್ಕೆ

ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ನೀಟ್‌ ಯುಜಿ (NEET-UG) 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮತ್ತೊಂದು ಪ್ರಮುಖ ಯಶಸ್ಸು ಸಾಧಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ತಜ್ಞೆಯಾಗಿ ಭಾಗಿಯಾಗಿದ್ದ ಪುಣೆಯ ಸಸ್ಯಶಾಸ್ತ್ರ (Botany) ಶಿಕ್ಷಕಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ಈ ಹಗರಣದಲ್ಲಿ ಬಂಧಿತರಾದ ಶಂಕಿತರ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಬಂಧಿತ ಶಿಕ್ಷಕಿಯನ್ನು ಮನೀಷಾ ಗುರುನಾಥ ಮಾಂಧರೆ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈಕೆಯನ್ನು ನೀಟ್ (NEET-UG) ಪರೀಕ್ಷಾ ಪ್ರಕ್ರಿಯೆಗಾಗಿ ವಿಷಯ ತಜ್ಞೆಯನ್ನಾಗಿ ನೇಮಿಸಿತ್ತು. ತೀವ್ರ ವಿಚಾರಣೆಯ ಬಳಿಕ ಸಿಬಿಐ ಈಕೆಯನ್ನು ದೆಹಲಿಯಲ್ಲಿ ಬಂಧಿಸಿದೆ.

ಹಗರಣ ನಡೆದಿದ್ದು ಹೇಗೆ?
ಈ ಹಿಂದೆ ಪುಣೆಯಲ್ಲಿ ಬಂಧನಕ್ಕೊಳಗಾಗಿದ್ದ ಮತ್ತೊಬ್ಬ ಆರೋಪಿ ಮನೀಷಾ ವಾಗ್ಮಾರೆ ಮೂಲಕ ಶಿಕ್ಷಕಿ ಮನೀಷಾ ಮಾಂಧರೆ ಕಳೆದ ಏಪ್ರಿಲ್‌ನಲ್ಲಿ ನೀಟ್ ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿದ್ದರು. ಈ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲೇ ವಿಶೇಷ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಿದ್ದರು. ಈ ತರಬೇತಿ ವೇಳೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ವಿಷಯಗಳ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ, ಆ ಪ್ರಶ್ನೆಗಳನ್ನು ವಿದ್ಯಾರ್ಥಿಗಳ ನೋಟ್‌ಬುಕ್‌ಗಳಲ್ಲಿ ಬರೆಸಿ, ಪಠ್ಯಪುಸ್ತಕಗಳಲ್ಲೂ ಗುರುತು ಮಾಡಿಸಿದ್ದರು.
ಮೇ 3 ರಂದು ನಡೆದ ನೈಜ ನೀಟ್‌ ಯುಜಿ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ ಬಹುತೇಕ ಪ್ರಶ್ನೆಗಳು, ಈಕೆ ಮುಂಚಿತವಾಗಿಯೇ ನೀಡಿದ್ದ ಪ್ರಶ್ನೆಗಳೊಂದಿಗೆ ಸಂಪೂರ್ಣವಾಗಿ ತಾಳೆಯಾಗಿವೆ ಎಂದು ಸಿಬಿಐ ಪತ್ತೆಹಚ್ಚಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ದೇಶಾದ್ಯಂತ ವ್ಯಾಪಿಸಿದ ತನಿಖೆ: ತಾಂತ್ರಿಕ ದಾಖಲೆಗಳ ವಶ
ಕಳೆದ 24 ಗಂಟೆಗಳಲ್ಲಿ ಸಿಬಿಐ ದೇಶದ 6 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ. ಈ ವೇಳೆ ಹಗರಣಕ್ಕೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳು, ಲ್ಯಾಪ್‌ಟಾಪ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ತೀವ್ರ ವಿಶ್ಲೇಷಣೆ ನಡೆಯುತ್ತಿದೆ.
ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹ್ಲಿಯಾನಗರದಿಂದ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಐವರು ಸದ್ಯ 7 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪುಣೆಯಲ್ಲಿ ಬಂಧಿಸಲಾದ ಇಬ್ಬರನ್ನು ದೆಹಲಿಗೆ ಕರೆತರಲಾಗುತ್ತಿದ್ದು, ಉಳಿದವರ ವಿಚಾರಣೆ ಮುಂದುವರಿದಿದೆ.
ಲಕ್ಷಾಂತರ ರೂಪಾಯಿ ಹಣ ಪಡೆದು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಪ್ರಶ್ನೆಗಳನ್ನು ಒದಗಿಸುತ್ತಿದ್ದ ಮಧ್ಯವರ್ತಿಗಳು ಹಾಗೂ ರಸಾಯನಶಾಸ್ತ್ರ (Chemistry) ಮತ್ತು ಜೀವಶಾಸ್ತ್ರ (Biology) ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನೈಜ ಮೂಲವನ್ನು ಪತ್ತೆಹಚ್ಚಿರುವುದಾಗಿ ಸಿಬಿಐ ತಿಳಿಸಿದೆ.

ಶುಕ್ರವಾರವಷ್ಟೇ ಸಿಬಿಐ ಈ ಹಗರಣದ ಮುಖ್ಯ ಸೂತ್ರಧಾರಿ (Kingpin), ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿಯನ್ನು ಬಂಧಿಸಿತ್ತು. ಎನ್‌ಟಿಎ ಪರವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿದ್ದ ಈತನಿಗೆ ಪ್ರಶ್ನೆ ಪತ್ರಿಕೆಗಳ ನೇರ ಪ್ರವೇಶವಿತ್ತು (Access). ಏಪ್ರಿಲ್ ಕೊನೆಯ ವಾರದಲ್ಲಿ ಈತ ಮನೀಷಾ ವಾಗ್ಮಾರೆ ಜೊತೆಗೂಡಿ ಪುಣೆಯ ತನ್ನ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ಕ್ಲಾಸ್ ನಡೆಸಿ, ಪ್ರಶ್ನೆಗಳ ಜೊತೆಗೆ ಆಯ್ಕೆಗಳು (Options) ಮತ್ತು ಸರಿಯಾದ ಉತ್ತರಗಳನ್ನು ಬರೆಸಿದ್ದ. ವಿದ್ಯಾರ್ಥಿಗಳು ಬರೆದುಕೊಂಡಿದ್ದ ಕೈಬರಹದ ಪ್ರಶ್ನೆಗಳು ಮೇ 3ರ ಕೆಮಿಸ್ಟ್ರಿ ಪೇಪರ್‌ಗೆ ಹೊಂದಿಕೆಯಾಗಿದ್ದವು
ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ನೀಡಿದ ದೂರಿನ ಮೇರೆಗೆ ಮೇ 12 ರಂದು ಸಿಬಿಐ ಈ ಪತ್ರಿಕೆ ಸೋರಿಕೆ ಹಗರಣದ ಅಧಿಕೃತ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿತ್ತು. ಸದ್ಯ ಪರೀಕ್ಷಾ ಮಂಡಳಿಯ ತಜ್ಞರೇ ಈ ಹಗರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement