ಮೊರ್ಬಿ : ಮನೆಯ ಬಾಡಿಗೆ ಹಣವನ್ನು ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ತನ್ನದೇ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲು ಮನೆ ಮಾಲೀಕನಿಗೆ ಅವಕಾಶ ನೀಡಿದ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮನೆ ಮಾಲೀಕನನ್ನೂ ಬಂಧಿಸಲಾಗಿದೆ.
ಈ ಘಟನೆ ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೂಲತಃ ಗುಜರಾತಿನ ಸುರೇಂದ್ರನಗರದ ಈ ಬಡ ಕುಟುಂಬ, ಆರು ತಿಂಗಳ ಹಿಂದೆಯಷ್ಟೇ ಜೀವನೋಪಾಯ ಅರಸಿ ಮೊರ್ಬಿಗೆ ವಲಸೆ ಬಂದಿತ್ತು. ಅಲ್ಲಿ ತಿಂಗಳಿಗೆ 2,000 ರೂಪಾಯಿ ಬಾಡಿಗೆಯ ಕೊಠಡಿಯೊಂದರಲ್ಲಿ ವಾಸವಿದ್ದರು. ಆದರೆ, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕುಟುಂಬಕ್ಕೆ ಕಳೆದ ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಒಟ್ಟು 8,000 ರೂಪಾಯಿ ಬಾಡಿಗೆ ಬಾಕಿ ಉಳಿದಿತ್ತು.
ಬಾಕಿ ಇರುವ ಬಾಡಿಗೆ ಹಣವನ್ನು ವಸೂಲಿ ಮಾಡಲು ಜಮೀನ್ದಾರ ಒತ್ತಡ ಹೇರಿದ್ದಾನಲ್ಲದೆ, ಅತ್ಯಂತ ಅಮಾನವೀಯ ಪ್ರಸ್ತಾಪವೊಂದನ್ನು ಇಟ್ಟಿದ್ದಾನೆ. ಆರ್ಥಿಕ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಮನೆ ಮಾಲೀಕನಿಗೆ ಬಾಡಿಗೆ ಹಣದ ಬದಲಾಗಿ ತನ್ನ ಪತ್ನಿ ಮತ್ತು ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಈ ವ್ಯಕ್ತಿ ಮುಕ್ತ ಅವಕಾಶ ನೀಡುವುದಾಗಿ ಆಘಾತಕಾರಿ ಒಪ್ಪಂದ ಮಾಡಿಕೊಂಡಿದ್ದ. ಇದರ ಪರಿಣಾಮವಾಗಿ ಮನೆ ಮಾಲೀಕ ಆತನ ಪತ್ನಿ ಮತ್ತು ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ತಾಯಿಯ ದೂರಿನಿಂದ ಬೆಳಕಿಗೆ ಬಂದ ಸತ್ಯ:
ಈ ಭೀಕರ ದೌರ್ಜನ್ಯದ ವಿಷಯ ಪೀಡಿತ ಮಹಿಳೆಯ ತಾಯಿಗೆ (ಅಪ್ರಾಪ್ತ ಬಾಲಕಿಯ ಅಜ್ಜಿ) ತಿಳಿಯುತ್ತಿದ್ದಂತೆ, ಅವರು ತಕ್ಷಣವೇ ಮೊರ್ಬಿ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು, ತಂದೆ ಮತ್ತು ಜಮೀನ್ದಾರನ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳು ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನೂ ತಕ್ಷಣವೇ ಬಂಧಿಸಿದ್ದಾರೆ.
“ಅಪ್ರಾಪ್ತ ಬಾಲಕಿಯ ತಂದೆ ಮತ್ತು ಜಮೀನ್ದಾರ ಇಬ್ಬರೂ ಸೇರಿ ಸಂಚು ರೂಪಿಸಿ ಈ ಘೋರ ದೌರ್ಜನ್ಯವನ್ನು ಎಸಗಿದ್ದಾರೆ. ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ,” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಮೂರನೇ ವ್ಯಕ್ತಿಯೊಬ್ಬನ ಕೈವಾಡ ಇರುವ ಶಂಕೆಯೂ ಇದ್ದು, ತಲೆಮರೆಸಿಕೊಂಡಿರುವ ಆ ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ