ತ್ವಿಷಾ ಶರ್ಮಾ ಸಾವಿನ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು ದಾಖಲು

ನವದೆಹಲಿ: ಯುವತಿ ತ್ವಿಷಾ ಶರ್ಮಾ ಅವರ ಶಂಕಾಸ್ಪದ ವರದಕ್ಷಿಣೆ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮಾಧ್ಯಮ ವರದಿಗಳು ಮತ್ತು ಘಟನೆಯ ಗಂಭೀರತೆಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಶನಿವಾರ ಸ್ವಯಂಪ್ರೇರಿತವಾಗಿ (Suo Motu) ಪ್ರಕರಣವನ್ನು ದಾಖಲಿಸಿಕೊಂಡಿದೆ.
 ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ಬರುವ ಸೋಮವಾರ (May 25) ಇದರ ವಿಚಾರಣೆ ನಡೆಸಲಿದೆ ಎಂದು ಲೈವ್‌ ಲಾ ವರದಿ ಮಾಡಿದೆ.
ನೋಯ್ಡಾ ನಿವಾಸಿಯಾಗಿದ್ದ 33 ವರ್ಷದ ತ್ವಿಷಾ ಶರ್ಮಾ (ಮಾಜಿ ಮಿಸ್ ಪುಣೆ ವಿಜೇತೆ) ಮತ್ತು ಸಮರ್ಥ ಸಿಂಗ್ ಐದು ತಿಂಗಳ ಹಿಂದೆ ಡೇಟಿಂಗ್ ಆಪ್ ಮೂಲಕ ಭೇಟಿಯಾಗಿ ವಿವಾಹವಾಗಿದ್ದರು. ಆದರೆ, ಮೇ 12 ರಂದು ಭೋಪಾಲದ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ನಿವಾಸದಲ್ಲಿ ತ್ವಿಷಾ ಶವವಾಗಿ ಪತ್ತೆಯಾಗಿದ್ದರು. ತ್ವಿಷಾ  ಕುಟುಂಬಸ್ಥರು ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪ ಹೊರಿಸಿದ್ದಾರೆ.
ಪತಿ ಸಮರ್ಥ ಸಿಂಗ್ ವಕೀಲರಾಗಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಈತ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿದ್ದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದು, ಶುಕ್ರವಾರ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಸದ್ಯ ನ್ಯಾಯಾಲಯ ಆತನನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅತ್ತೆ ಗಿರಿಬಾಲಾ ಸಿಂಗ್ ಮಾಜಿ ಜಿಲ್ಲಾ ನ್ಯಾಯಾಧೀಶರು. ಇವರಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಮಧ್ಯಪ್ರದೇಶ ಪೊಲೀಸರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದ್ವಿತೀಯ ಮರಣೋತ್ತರ ಪರೀಕ್ಷೆಗೆ ಆದೇಶ
ತ್ವಿಷಾ ಕುಟುಂಬಸ್ಥರು ಅತ್ತೆ-ಮಾವನ ಮನೆಯವರು ನಿರಂತರವಾಗಿ ಗೃಹಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದು, ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಲು ಎರಡನೇ ಬಾರಿ ಮರಣೋತ್ತರ ಪರೀಕ್ಷೆ (Post-mortem) ನಡೆಸಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಸಮ್ಮತಿಸಿರುವ ಹೈಕೋರ್ಟ್, ಶುಕ್ರವಾರ ಎರಡನೇ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ.
ಆರೋಪಿಗಳು ಪ್ರಭಾವಿ ಕಾನೂನು ಹಿನ್ನೆಲೆಯುಳ್ಳವರಾಗಿರುವುದರಿಂದ ತನಿಖೆಯಲ್ಲಿ ಯಾವುದೇ ಲೋಪ ಅಥವಾ ಸಾಂಸ್ಥಿಕ ಪಕ್ಷಪಾತ ನಡೆಯಬಾರದು ಎಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಹೆಜ್ಜೆ ಇಟ್ಟಿದೆ. ಸೋಮವಾರ ನಡೆಯಲಿರುವ ವಿಚಾರಣೆಯು ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement